ಕಲಬುರಗಿ : ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಮೆಂಟ್ ಕಂಪನಿಗಳು ಸ್ಥಳೀಯವಾಗಿ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ನಿರ್ವಹಣೆಯ ವೈಜ್ಞಾನಿಕ ವಿಲೇವಾರಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಬಿ. ಆಡಿ ಸೂಚನೆ ನೀಡಿದ್ದಾರೆ.
ವಾಡಿ ಪಟ್ಟಣದ ಸಿಮೆಂಟ್ ಕಾರ್ಖಾನೆಗೆ ಭೇಟಿ ನೀಡಿ ಆಡಳಿತ ಭವನದ ಸಿಮೆಂಟ್ ಉದ್ದಿಮೆದಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಸಿಮೆಂಟ್ ಉತ್ಪಾದನೆಗೆ ಪೂರಕವಾದ ವಾತಾವರಣ ಇಲ್ಲಿದೆ. ವಾಡಿ ಸಿಮೆಂಟ್ ಕಂಪನಿಯಲ್ಲಿ ಸುಮಾರು 5 ಲಕ್ಷ ಟನ್ ಹಳೇ ಕಸ ಸೂಕ್ತ ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿದೆ. ಇದರಲ್ಲಿ ಸುಮಾರು 400 ಟನ್ ಆರ್.ಡಿ.ಎಫ್. ಇಂಧನ ಉತ್ಪಾದನೆಗೆ ಅವಕಾಶಗಳಿದ್ದು, ಕಂಪನಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಕಾರ್ಖಾನೆಗಳು ಸ್ಥಳೀಯ ಜನರ ಆರೋಗ್ಯದ ಹಿತ ಕಾಪಾಡುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಪ್ರದೇಶದ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಲು ಬದ್ಧವಾಗಿರಬೇಕು ಎಂದರು. ಇದಕ್ಕೂ ಮುನ್ನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ ಬಿ.ಆಡಿ ಅವರು ಶಹಾಬಾದ ಪಟ್ಟಣದ ನಗರ ಸಭೆಯ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ವೀಕ್ಷಿಸಿದರು.