ಕಲಬುರಗಿ : ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ಕನಿಷ್ಟ 1,500 ರೂಪಾಯಿ ಪ್ರೋತ್ಸಾಹಧನ ನೀಡಬೇಕೆಂದು ಜೇವರ್ಗಿ ಶಾಸಕ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿಯ ಜೀವ ಬೆಳೆ ತೊಗರಿ. ಪ್ರತಿ ವರ್ಷ ಜಿಲ್ಲೆಯಲ್ಲಿ 40 ರಿಂದ 45 ಲಕ್ಷ ಕ್ವಿಂಟಲ್ ತೊಗರಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಅತಿವೃಷ್ಟಿ, ಪ್ರವಾಹದಿಂದಾಗಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತೊಗರಿಗೆ ಹಾನಿಯಾಗಿದೆ. ವಿರ್ಪಯಾಸ ಅಂದರೆ ಕೇಂದ್ರ ಸರ್ಕಾರದಿಂದ ₹6 ಸಾವಿರ ಮಾತ್ರ ಬೆಂಬಲ ಬೆಲೆ ಘೋಷಿಸಲಾಗಿದೆ.
ರಾಜ್ಯ ಸರ್ಕಾರ ಈವರೆಗೂ ಪ್ರೋತ್ಸಾಹ ಧನ ಘೋಷಿಸಿಲ್ಲ. ಪ್ರತಿ ಕ್ವಿಂಟಲ್ ತೊಗರಿಗೆ ಕನಿಷ್ಟ 1,500 ರೂ. ಪ್ರೋತ್ಸಾಹ ಧನ ನೀಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಭಾಗದ ಶಾಸಕರು ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ ಎಂದರು.
ಓದಿ: ವಿಧಾನ ಪರಿಷತ್ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಕಿತ್ತಾಟ
ಕೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕರ್ನಾಟಕ ರಾಜ್ಯದ ವಿಷಯದಲ್ಲಿ ಕೇಂದ್ರ ಯಾಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯೋ ಗೊತ್ತಿಲ್ಲ. ಎಲ್ಲವೂ ಮುಗಿದ ನಂತರ ಕೇಂದ್ರದ ಅಧ್ಯಯನ ತಂಡ ಭೇಟಿ ನೀಡಿದ್ರೆ ಏನು ಪ್ರಯೋಜನ?. ಮೂರು ತಿಂಗಳ ನಂತರ ನೋಡಲು ಏನು ಉಳಿದಿರುತ್ತೆ.
ಕೇಂದ್ರ ಈಗ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವುದರಿಂದ ಏನೂ ಪ್ರಯೋಜನವಿಲ್ಲ. ರಾಜ್ಯಕ್ಕೆ ಕೇವಲ 577 ಕೋಟಿ ರೂ. ಘೋಷಣೆಯಾಗಿದೆ. ಎನ್ಡಿಆರ್ಎಫ್ ನಿಯಮದ ಪ್ರಕಾರ ಕನಿಷ್ಟ 2,500 ಕೋಟಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.