ಕಲಬುರಗಿ: ಜೆಡಿಎಸ್ ಪಕ್ಷ ಕಾರ್ಯಕರ್ತರ ಶ್ರಮದ ಮೇಲೆ ನಿಂತಿದೆ. ಜೆಡಿಎಸ್ ಪಕ್ಷವನ್ನು ಅಷ್ಟು ಸುಲಭವಾಗಿ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಉಳಿದಿರುವುದೇ ಕಾರ್ಯಕರ್ತರ ಹೋರಾಟದ ಮೇಲೆ ಎಂದು ಹೇಳಿದ್ದಾರೆ.
ಕಳೆದ 15 ವರ್ಷಗಳಲ್ಲಿ ಜೆಡಿಎಸ್ ನಲ್ಲಿ ಬಹಳಷ್ಟು ಬೆಳವಣಿಗೆಗಳಾಗಿವೆ. ನಮ್ಮ ನಾಯಕರು ಪಕ್ಷ ತೊರೆದು ಹೋದರೂ ಈ ಪಕ್ಷವನ್ನು ಉಳಿಸಿಕೊಂಡವರು ಕಾರ್ಯಕರ್ತರು. ಅದರಿಂದ ಜೆಡಿಎಸ್ ತೊರೆದು ಹೋದ ನಾಯಕರು ಚುನಾವಣೆ ಉಪಯೋಗಿಸಿಕೊಂಡು ಪಕ್ಷ ನಾಶಪಡಿಸುತ್ತೇವೆ ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ರಾಜ್ಯಸಭೆ ಚುನಾವಣೆ ನಂತರ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೇನೆ. ಎರಡೂ ಪಕ್ಷಗಳು ಗೆಲುವಿಗಾಗಿ ತಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಂಡಿವೆ. ಅಡ್ಡ ಮತದಾನಕಿಂತಲೂ ಗಣಿತ ಲೆಕ್ಕಾಚಾರ ಪ್ರಮುಖವಾಗುತ್ತದೆ ಎಂದು ಹೇಳಿದರು.
ಬಸವರಾಜ್ ಹೊರಟ್ಟಿ ವಿಚಾರವಾಗಿ ಮಾತನಾಡಿದ ಹೆಚ್ಡಿಕೆ, ಅವರು 40 ವರ್ಷಗಳ ಕಾಲ ಪ್ರತಿನಿಧಿಸಿದ್ದರಲ್ಲ, ಆವಾಗ ಏನು ಮಾಡಿದ್ದರು. ನಾನು ಸಿಎಂ ಆದಾಗ ಎಷ್ಟು ಕಾಲೇಜು ಇವೆ ಎಂಬುದು ಹೊರಟ್ಟಿಯವರಿಗೆ ಮಾಹಿತಿ ಇರಲಿಲ್ಲ. ಕಪ್ ಗೆಲ್ಲಿಸಲು ಅನೇಕರು ಹೋರಾಟ ಮಾಡುತ್ತಾರೆ. ಆದ್ರೆ ನಾಯಕ ಮಾತ್ರ ಕಪ್ ಹಿಡಿಯೋದು ಪದ್ಧತಿ. ಆದರೆ ನಾನೇ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಮಾಡಿದ್ದೇನೆ. ಅವರು ಏನೂ ಮಾಡಿಲ್ಲ, ನಮ್ಮಿಂದ ಎಲ್ಲಾ ಪಡೆದುಹೋದ ಮೇಲೆ ಈಗ ನಮ್ಮ ವಿರುದ್ಧ ಮಾತಾಡ್ತಾರೆ. ಗೆಲುವಿಗೆ ಯಾವ ರೀತಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಅನ್ನೋದು ನಮಗೂ ಗೊತ್ತಾಗುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಚಡ್ಡಿ ಸುಡುವ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಚಡ್ಡಿ ರಾಜಕಾರಣಕ್ಕೂ ನನಗೂ ಸಂಬಂಧವಿಲ್ಲ, ನೀವು ನೀವು ಚಡ್ಡಿ ಬಿಚ್ಚ್ಕೊಳತ್ತಿರೋ, ಕಟ್ಟಿಕೊಳ್ಳುತ್ತಿರೊ ನನಗೆ ಗೊತ್ತಿಲ್ಲ. ಆದರೆ, ರಾಜ್ಯದ ಜನರ ಚಡ್ಡಿ ಕಳೆದು ಅವರಿಗೆ ಅಗೌರವ ಸಲ್ಲಿಸಬೇಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಓದಿ : ಗ್ರಾಮಕ್ಕೆ ನುಗ್ಗಿದ ಕಾಡಾನೆ.. ಹಾವಳಿಗೆ ಬೆಚ್ಚಿಬಿದ್ದ ಹಾಸನದ ಜನ