ಕಲಬುರಗಿ : ರಸ್ತೆ, ರೈಲು, ವಾಯು ಸಂಪರ್ಕ ಸೇರಿ ಉತ್ತಮ ಮೂಲಸೌಕರ್ಯ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆಗೆ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲು ಮುಂದಿನ ದಿನದಲ್ಲಿ ಕಲಬುರಗಿಯಲ್ಲಿ ಹೂಡಿಕೆದಾರರ ಸಮಾವೇಶ ಆಯೋಜನೆ ಮತ್ತು ರೋಡ್ ಶೋ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಘೋಷಿಸಿದರು.
ಇಲ್ಲಿನ ಹೆಚ್‌ಕೆಸಿಸಿಐ ಸಭಾಂಗಣದಲ್ಲಿ “ವಾಣಿಜ್ಯೋದ್ಯಮಿಗಳೊಂದಿಗೆ ಸಚಿವರ ಸಂವಾದ”ದಲ್ಲಿ ಉದ್ಯಮಿ ಸಂತೋಷ ಲಂಗರ್ ಅವರ ಮನವಿಗೆ ಸಚಿವರು ಪ್ರತಿಕ್ರಿಯಿಸಿ ಮಾತನಾಡಿದರು. ಸ್ಥಳೀಯ ಉದ್ಯಮಿಗಳ ಜೊತೆ ಇತರೆ ಭಾಗದ ಉದ್ಯಮಿಗಳನ್ನು ಸರ್ಕಾರ ಒದಗಿಸುತ್ತಿರುವ ಮೂಲಸೌಕರ್ಯ ಸೇವೆಗಳ ಬಗ್ಗೆ ಮನವೊಲಿಸಲು ಇಂತಹ ಸಮಾವೇಶ ಮತ್ತು ರೋಡ್ ಶೋ ಸಹಕಾರಿಯಾಗಲಿದೆ.
ಹುಬ್ಬಳ್ಳಿ ಸಮಾವೇಶದ ಫಲವಾಗಿಯೇ ಯಾದಗಿರಿ ಕಡೇಚೂರನಲ್ಲಿ ಸುಮಾರು 15 ಫಾರ್ಮ್ ಉದ್ಯಮಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದರು. ರಾಜ್ಯದ ಇತರೆ ವಿದ್ಯುತ್ ಸಂಸ್ಥೆಗಳು ವಿದ್ಯುತ್ ಕಂಬಗಳನ್ನು ಸ್ಥಳೀಯ ಉದ್ಯಮಿಗಳಿಂದ ಮಾತ್ರ ಖರೀದಿಸುತ್ತಿವೆ. ಆದರೆ, ಇಲ್ಲಿನ ಜೆಸ್ಕಾಂ ಸಂಸ್ಥೆ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಗುತ್ತೆಗಾದಾರರಿಂದ ವಿದ್ಯುತ್ ಕಂಬ ಖರೀದಿಸುತ್ತಿದೆ.
ಇದರಿಂದ ಸ್ಥಳೀಯ ಉದ್ಯಮಿದಾರರಾದ ನಮಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಮತ್ತೊಬ್ಬರು ಮನವಿ ಮಾಡಿದರು. ಈ ಸಂಬಂಧ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವರು ಅವರ ಮನವಿಗೆ ಭರವಸೆ ನೀಡಿದರು.
ಮಹಿಳಾ ಉದ್ಯಮಿ ವಿಜಯಲಕ್ಷ್ಮಿ ಮಾತನಾಡಿ, ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದ ಮಹಿಳಾ ಪಾರ್ಕ್‍ನಲ್ಲಿ ಉದ್ಯಮ ಸ್ಥಾಪನೆಗೆ ಮಹಿಳಾ ಉದ್ಯಮಿಗಳು ಮುಂದೆ ಬಂದಿದ್ದಾರೆ. ಸೂಕ್ತ ಮೂಲಸೌಕರ್ಯ ಮತ್ತು ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಸಂವಾದದಲ್ಲಿ ಅನೇಕ ಯುವ ಮತ್ತು ಹಿರಿಯ ಉದ್ಯಮಿಗಳು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಹೇಳಿಕೊಂಡರು.