ಕಲಬುರಗಿ: "ನಮಗೆ ಮಾರ್ಕೊಂಡು ತಿನ್ನೋ ಅಧಿಕಾರ ಅದ, ನಾನಿರೋದೇ ಮಾರಿಕೊಳ್ಳೋಕೆ. ಅದು ನಮ್ಮ ಹಕ್ಕು, ಅದನ್ನು ಕೇಳೋಕೆ ನೀವ್ ಯಾರು"... ಹೀಗೆ ಆವಾಜ್ ಹಾಕಿರೋದು ಜಿಲ್ಲೆಯ ಸೈಯದ್ ಚಿಂಚೋಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ.
ಅಂಗನವಾಡಿ ಕಾರ್ಯಕರ್ತೆ ಸರೋಜಾ ರಾಣಾಪುರ ಎಂಬವರು ಅದೇ ಗ್ರಾಮದ ಜಗನ್ನಾಥ ಎಂಬವರಿಗೆ ದೂರವಾಣಿಯಲ್ಲಿ ಈ ರೀತಿ ಆವಾಜ್ ಹಾಕಿದ್ದಾರೆ. ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸರ್ಕಾರ ಪೌಷ್ಟಿಕ ಆಹಾರ ಪೂರೈಸುತ್ತಿದೆ. ಕೊರೊನಾ ಸೋಂಕಿನ ಹಿನ್ನೆಲೆ ಮನೆ ಮನೆಗೆ ದಿನಸಿ ಕಿಟ್ ತಲುಪಿಸುವಂತೆ ನಿರ್ದೇಶನ ಸಹ ನೀಡಿದೆ. ಆದರೆ, ಈ ಅಂಗನವಾಡಿ ಕಾರ್ಯಕರ್ತೆ ಮಾತ್ರ ಆಹಾರ ವಿತರಿಸದೆ, ತನ್ನನ್ನು ಪ್ರಶ್ನಿಸಿದವರಿಗೆ ಆವಾಜ್ ಹಾಕುತ್ತಿದ್ದಾರೆ.
ಅಂಗನವಾಡಿಗೆ ಪೂರೈಕೆಯಾಗಿರುವ ಬೆಲ್ಲ, ಹೆಸರು ಕಾಳು, ಮೊಟ್ಟೆ ಸೇರಿದಂತೆ ಪೌಷ್ಠಿಕ ಆಹಾರಗಳನ್ನು ಈಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದ್ರೆ, ಯಾರಿಗೆ ಹೇಳ್ತೀ ಹೇಳು, ಕಂಪ್ಲೈಂಟ್ ಮಾಡ್ತಿಯೋ ಮಾಡು. ಯಾರ ಬಳಿಯಿಂದ ಮಾತನಾಡಿಸ್ತಿಯಾ ಮಾತನಾಡಿಸು ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಜಗನ್ನಾಥ ಆರೋಪ ಮಾಡಿದ್ದಾರೆ.
![Illegal sale of nutritious food](https://etvbharatimages.akamaized.net/etvbharat/prod-images/8060965_433_8060965_1594987078388.png)
ಬಂದ ಆಹಾರದಲ್ಲಿ ಒಂದಿಷ್ಟನ್ನು ಕೊಡ್ತೇವೆ. ಉಳಿದದ್ದನ್ನು ಮಾರಿಕೊಳ್ಳುತ್ತೇವೆ. ಎಲ್ಲವನ್ನೂ ನಿಮಗೆ ಕೊಟ್ಟರೆ ನಮಗೇನು ಉಳಿಯುತ್ತೆ ಎಂದಿರುವ ಆಡಿಯೋ ವೈರಲ್ ಆಗಿದೆ. ಅಂಗನವಾಡಿ ಕಾರ್ಯಕರ್ತೆಯ ವರ್ತನೆಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಾಗೂ ಸಿಡಿಪಿಒ ಕಚೇರಿಗೆ ದೂರು ನೀಡಿದ್ದಾರೆ.