ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಕಿರುತರೆ-ಸಾಮಾಜಿಕ ಜವಾಬ್ದಾರಿಗಳ ಕುರಿತಾಗಿ ಮಾತನಾಡಿದ ನಿದೇರ್ಶಕ ಬಿ. ಸುರೇಶ್, ಧರ್ಮಾಧರಿತವಾಗಿರುವ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಯನ್ನ ವಿರೋಧಿಸುತ್ತೇನೆಂದು ಹೇಳಿದರು.
ಕಲಬುರಗಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಇಂದು 3ನೇ ದಿನಕ್ಕೆ ಕಾಲಿಟ್ಟಿದೆ. ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಚಲನಚಿತ್ರ ಕನ್ನಡ ಸಾಹಿತ್ಯ ಎನ್ನುವ ವಿಷಯ ಕುರಿತಂತೆ ವಿಚಾರಗೋಷ್ಠಿಗೆ ಚಾಲನೆ ನೀಡಲಾಯಿತು. ಕಿರುತೆರೆ-ಸಾಮಾಜಿಕ ಜವಾಬ್ದಾರಿಗಳ ಕುರಿತಾಗಿ ಮಾತನ್ನಾರಂಭಿಸಿದ ನಿದೇರ್ಶಕ ಬಿ. ಸುರೇಶ್, ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ನೀಡಿರುವ ಅನುದಾನವನ್ನ ವಾಪಸ್ ಪಡೆಯುವಂತೆ ಮಂತ್ರಿಯವರು ಹೇಳಿದ್ದಾರೆ. ಅನುದಾನ ವಾಪಸ್ ಪಡೆದಿರುವುದಕ್ಕೂ ನನ್ನ ವಿರೋಧವಿದೆ. ಅಲ್ಲದೇ ಸಾಹಿತ್ಯ ಸಮ್ಮೇಳನ ನಡೆದರೆ ಪೆಟ್ರೋಲ್ ಬಾಂಬ್ ಎಸೆಯುವುದಾಗಿ ಬೆದರಿಸಿದವರನ್ನ ಸರ್ಕಾರ ಕೂಡಲೇ ಬಂಧಿಸಿ ಶಿಕ್ಷೆ ನೀಡ್ಬೇಕೆಂದು ಒತ್ತಾಯಿಸಿದ್ರು.
ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ವಿಷಯ ಮಂಡಿಸುವ ಜೊತೆಗೆ ಕನ್ನಡ ಚಿತ್ರರಂಗದ ಮುಂದಿರುವ ಸವಾಲುಗಳು ಕುರಿತಾಗಿ ಮಾತನಾಡಿದ್ರು. ಚಿತ್ರರಂಗಕ್ಕೆ ನೆರವಾಗಲು ಸರ್ಕಾರ ಸಬ್ಸಿಡಿಗಳನ್ನ ನೀಡುತ್ತಿದೆ. ಆದರೆ, ಈ ಸಬ್ಸಿಡಿಯನ್ನ ಸರ್ಕಾರ ನಿಲ್ಲಿಸಬೇಕು. ಯಾಕಂದ್ರೆ, ಸರ್ಕಾರದ ಸಬ್ಸಿಡಿ ಹಣ ದುರ್ಬಳಕೆಯಾಗುತ್ತಿದೆ. ಕೆಲ ಅಧಿಕಾರಿಗಳೇ ಮೊಬೈಲ್‌ನಲ್ಲಿ ಚಿತ್ರ ನಿರ್ಮಾಣ ಮಾಡಿಕೊಂಡು ಸಬ್ಸಿಡಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಇನ್ನೂ ಕೆಲವರು ಈಗಿನ ಮೊಬೈಲ್, ಸಣ್ಣ ಕ್ಯಾಮೆರಾಗಳಿಂದ ಚಿತ್ರ ನಿರ್ಮಾಣ ಮಾಡಿ ಸಬ್ಸಿಡಿ ಪಡೆಯುತ್ತಿದ್ದಾರೆ. ಸಬ್ಸಿಡಿ ಹಣ ಬಿಡುಗಡೆಗೆ ಅಧಿಕಾರಿಗಳಿಗೆ 3 ಲಕ್ಷ ರೂ. ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಂಭೀರ ಆರೋಪ ಮಾಡಿದ್ರು.
ರಾಜ್ಯದಲ್ಲಿರುವ ಸುಮಾರು 600 ಚಿತ್ರಮಂದಿರಗಳಲ್ಲಿ ಬಹುತೇಕ ಪರಭಾಷೆಯ ಹಿಡಿತದಲ್ಲಿವೆ. ಅಲ್ಪ ಸಂಖ್ಯೆಯಲ್ಲಿರುವ ಚಿತ್ರಮಂದಿರಗಳಲ್ಲಿ ಕನ್ನಡ ನಿರ್ದೇಶಕರು ಪರದಾಟ ನಡೆಸಬೇಕಾಗಿದೆ. ಈಗಿನ ಚಿತ್ರಮಂದಿರಗಳು ಆಧುನಿಕತೆ ಹೊಂದಿದೆ. ಹೀಗಾಗಿ ಕೆಲ ಕಾನೂನುಗಳ ಬದಲಾವಣೆ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು, ನಿಯಮಗಳನ್ನ ಬದಲಾಯಿಸಿ ಎಂದು ಮನವಿ ಮಾಡಿದರೂ ಕೂಡ ಸರ್ಕಾರ ಇನ್ನೂ ಸ್ಪಂದಿಸಿಲ್ಲವೆಂದರು.
ನಿರ್ದೇಶಕ ಬಿ. ಸುರೇಶ್ ಅವರ ಟೀಕೆಗೆ ಕಸಾಪ ಅಧ್ಯಕ್ಷ ನಾಡೋಜ ಡಾ. ಮನುಬಳಿಗಾರ್ ಸ್ಪಷ್ಟನೆ ನೀಡಿದರು. ಸರ್ಕಾರದ ಅನುದಾನ ಸಾರ್ವಜನಿಕರ ಸ್ವತ್ತು. ಆದ ಕಾರಣ ಸಾರ್ವಜನಿಕರಿಗೆ ಅದನ್ನ ಬಳಸುವ ಹಕ್ಕಿದೆ. ಆದರೆ, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುವಲ್ಲಿನ ವಾತಾವರಣ ಸರಿ ಇರಲಿಲ್ಲ. ಆ ಕಾರಣಕ್ಕೆ ಸಮ್ಮೇಳನ ಒಂದೆರೆಡು ತಿಂಗಳು ಮುಂದೂಡಲು ಜಿಲ್ಲಾ ಕಸಾಪದವರಿಗೆ ಸೂಚಿಸಿದ್ದೆ. ಆದರೆ, ನನ್ನ ಸೂಚನೆ ಧಿಕ್ಕರಿಸಿ ಸಮ್ಮೇಳನ ನಡೆಸಲಾಯಿತು. ಅಲ್ಲಿ ಹಠಕ್ಕೆ ಬಿದ್ದು ಸಮ್ಮೇಳನ ನಡೆಸಲು ತಿರ್ಮಾನಿಸಿದಾಗ, ಅದನ್ನ ಸಚಿವ ಸಿ ಟಿ ರವಿಯವರು ಒಪ್ಪಿಲ್ಲಿಲ್ಲ. ಹಾಗಾಗಿ ಅನುದಾನ ವಾಪಸ್ ಪಡೆದೆವು ಎಂದು ಸ್ಪಷ್ಟಪಡಿಸಿದ್ರು. ಇದೇ ವೇಳೆ ಆ ಗೌರವಧನವನ್ನ ವಾಪಸ್ ಕನ್ನಡ ನಿಧಿಗೆ ನೀಡುವುದಾಗಿ ಘೋಷಿಸಿದ್ರು.