ಕಲಬುರಗಿ: ಜಿಲ್ಲೆಯ ಗಡಿಕೇಶ್ವರದಲ್ಲಿ ನಿರಂತರ ಭೂಕಂಪನ ಸಂಭವಿಸುತ್ತಿದ್ದು, ಕಂಪನದ ಅಧ್ಯಯನಕ್ಕಾಗಿ ಇಂದು ಹೈದರಾಬಾದ್ನಿಂದ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಭೇಟಿ ನೀಡಿ ಅಧ್ಯಯನ ನಡೆಸುತ್ತಿದೆ.
ಭೂ ಕಂಪನದ ತೀವ್ರತೆಯನ್ನು ಅಳೆಯಲು ಗ್ರಾಮದಲ್ಲಿ ತಾತ್ಕಾಲಿಕವಾಗಿ ಸಿಸ್ಮೋಮೀಟರ್ ಅಳವಡಿಸಿದ್ದಾರೆ. ಇತ್ತ ಗ್ರಾಮ ವಾಸ್ತವ್ಯ ಮಾಡಿರುವ ಸಂಸದ ಉಮೇಶ್ ಜಾಧವ್ಗೂ ಭೂ ಕಂಪನದ ಅನುಭವ ಆಗಿದೆ.
ಮನೆಗಳು ಬಿರುಕು ಬಿಟ್ಟಿರೋದ್ರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಇನ್ನೊಂದೆಡೆ ಸಿಸ್ಮೋಮಿಟರ್ ಅಳವಡಿಸಿ ಭೂ ಕಂಪನದ ಕುರಿತು ವಿಜ್ಞಾನಿಗಳ ತಂಡ ಸಂಶೋಧನೆ ನಡೆಸುತ್ತಿದೆ. ಮತ್ತೊಂದೆಡೆ ಗ್ರಾಮ ವಾಸ್ತವ್ಯ ಮಾಡಿದ ಸಂಸದರಿಗೂ ತಟ್ಟಿದ ಭೂ ಕಂಪನದ ಬಿಸಿ ತಟ್ಟಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರದಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ ಭೂ ಕಂಪನ ಸಂಭವಿಸುತ್ತಲೇ ಇದೆ. ಭೂ ಕಂಪನಕ್ಕೆ ಹೆದರಿ ಗ್ರಾಮಸ್ಥರು ಊರು ತೊರೆದಿದ್ದಾರೆ, ಉಳಿದವರು ಸಹ ಊರನ್ನು ತೊರೆಯುತ್ತಿದ್ದಾರೆ.
ಜನರಲ್ಲಿ ಆತಂಕ ಹೆಚ್ಚಿಸಿರುವ ಭೂ ಕಂಪನದ ಬಗ್ಗೆ ಅಧ್ಯಯನ ನಡೆಸಲು ಇಂದು ಹೈದರಾಬಾದ್ನಿಂದ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿ ಕಂಪನದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಭೂ ಕಂಪನದ ಅಲೆಗಳ ತೀವ್ರತೆಯನ್ನು ಅಳೆಯಲು ಗ್ರಾಮದ ಗ್ರಾಮ ಪಂಚಾಯತ್ ಕಚೇರಿಯಲ್ಲಿ ತಾತ್ಕಾಲಿಕವಾಗಿ ಸಿಸ್ಮೋಮಿಟರ್ ಅಳವಡಿಸಿದ್ದಾರೆ. ಗ್ರಾಮದಲ್ಲಿ ಸಿಸ್ಮೋಮೀಟರ್ ಸ್ಥಾಪಿಸಿದ್ದರಿಂದ ಗಡಿಕೇಶ್ವರ ಸುತ್ತಮುತ್ತ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿದ್ದಲ್ಲಿ ನೆಲದೊಳಗಿನ ಭೂಮಿಯ ಚಲನೆ ಸಿಸ್ಮೋಮೀಟರ್ನಲ್ಲಿ ದಾಖಲಾಗಿ ಮಾಹಿತಿ ನೇರವಾಗಿ ಹೈದರಾಬಾದಿನ ಎನ್ಜಿಆರ್ಐ ಸಂಸ್ಥೆಗೆ ತಲುಪಲಿದೆ. ಈ ಮಾಹಿತಿ ಆಧರಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳ ತಂಡ ನಿರ್ಧರಿಸಲಿದೆ. ಎನ್ಜಿಆರ್ಐ ವಿಜ್ಞಾನಿಗಳಿಗೆ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ ವಿಜ್ಞಾನಿಗಳು ಸಾಥ್ ನೀಡಿದ್ರು.
ಸಂಸದ ಉಮೇಶ್ ಜಾಧವ್ ಅವರಿಗೂ ಭೂ ಕಂಪನದ ಅನುಭವ:
ಭೂ ಕಂಪನದಿಂದ ಭಯಬಿದ್ದ ಗ್ರಾಮಸ್ಥರು ಊರು ತೊರೆಯುತ್ತಿದ್ದಾರೆ. ಹೀಗಾಗಿ ಕಲಬುರಗಿ ಸಂಸದ ಉಮೇಶ್ ಜಾಧವ್ ಮತ್ತು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಶನಿವಾರ ರಾತ್ರಿ ಗಡಿಕೇಶ್ವರದ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರಿಗೆ ಧೈರ್ಯ ತುಂಬಿದ್ರು. ರಾತ್ರಿ ಮಲಗಿರುವ ವೇಳೆ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಮತ್ತೆ ಭೂಮಿ ಕಂಪಿಸಿದ್ದು, ಸಂಸದ ಉಮೇಶ್ ಜಾಧವ್ ಅವರಿಗೂ ಭೂ ಕಂಪನದ ಅನುಭವವಾಗಿದೆ. ವಿಪರ್ಯಾಸ ಎಂದ್ರೆ ಸಂಸದರು ಗ್ರಾಮ ವಾಸ್ತವ್ಯದ ರಾತ್ರಿ ಒಂದು ಗಂಟೆಯಿಂದ ಬೆಳಗಿನವರೆಗೆ ಕರೆಂಟ್ ಕೈಕೊಟ್ಟಿದ್ದು ರಾತ್ರಿ ಕತ್ತಲಲ್ಲೇ ಕಾಲ ಕಳೆದಿದ್ದಾರೆ.
ಈ ಹಿಂದೆ ಗಡಿಕೇಶ್ವರಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಭೂ ಕಂಪನದ ಅನುಭವ ಆಗಿತ್ತು. ಸ್ವತಃ ಕಂಪನದ ಎಫೆಕ್ಟ್ ಅನುಭವಿಸಿದ ಸಂಸದ ಜಾಧವ್, ಸರ್ಕಾರದಿಂದ ವ್ಯವಸ್ಥೆ ಕಲ್ಪಿಸೋದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ನಿರಂತರವಾಗಿ ಭೂ ಕಂಪನ ಆಗ್ತಿರೋದ್ರಿಂದ ಜನರಲ್ಲಿ ಭಯ-ಆತಂಕ ಮುಂದುವರೆದಿದೆ. ಕಾಳಜಿ ಕೇಂದ್ರ ತೆರೆದರೂ ಜನ ಊರು ತೊರೆಯುತ್ತಲೇ ಇದ್ದಾರೆ. ಭೂ ಕಂಪನದ ಬಗ್ಗೆ ವಿಜ್ಞಾನಿಗಳು, ಅಧಿಕಾರಿಗಳು ಸಂಶೋಧನೆ ನಡೆಸಲಿ. ಆದ್ರೆ ತಕ್ಷಣಕ್ಕೆ ನಮಗೆ ಮನೆಗೊಂದು ತಾತ್ಕಾಲಿಕ ಟಿನ್ ಶೆಡ್ ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು ಡಿಮ್ಯಾಂಡ್ ಮಾಡ್ತಿದ್ದಾರೆ.