ಕಲಬುರಗಿ: ತನ್ನ ಪತ್ನಿ ಸಾವಿಗೆ ಕಾರಣನಾದ ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತನ್ನ ಮಕ್ಕಳ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಂಡಾ ನಿವಾಸಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಕಲಬುರಗಿ ತಾಲೂಕಿನ ಸಣ್ಣೂರ ತಾಂಡಾ ನಿವಾಸಿ ಸುಭಾಷ ಚಿನ್ನಾರಾಠೋಡ ಎಂಬಾತ ಮಾಡಬೂಳ ಠಾಣೆಯ ಕಾನ್ಸ್‌ಟೇಬಲ್ ತೇಜುರಾಯ ರಾಠೋಡ ಎಂಬುವರ ಮೇಲೆ ಆರೋಪ ಮಾಡಿದ್ದಾರೆ. ತನ್ನ ಕುಟುಂಬ ಸಮೇತ ಮಾಧ್ಯಮಗಳ ಮುಂದೆ ಹಾಜರಾದ ಸುಭಾಷ್ ರಾಠೋಡ, ತನ್ನ ಪತ್ನಿ ನೀಲಾಬಾಯಿ ಆತ್ಮಹತ್ಯೆಗೆ ಮಾಡಬೂಳ ಠಾಣೆಯ ತೇಜುರಾಯ ರಾಠೋಡ ನೀಡಿದ ಕಿರುಕುಳ ಕಾರಣವಾಗಿದೆ. ಆತ ನನ್ನ ಪತ್ನಿಯೊಂದಿಗೆ ಅಸಭ್ಯವಾಗಿ ನಡೆದಿಕೊಂಡಿದ್ದರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಆಕೆಯ ಹೇಳಿಕೆ ಕೂಡ ಪಡೆದುಕೊಂಡಿದ್ದರು. ಆದ್ರೆ ದೂರು ದಾಖಲಿಸಿ 11 ತಿಂಗಳಾದರೂ ಇಲ್ಲಿವರೆಗೆ ಎಫ್ಐಆರ್ ಆಗಿಲ್ಲ. ಪ್ರಭಾವ ಬಳಸಿಕೊಂಡು ಎಫ್‌ಐಆರ್ ಆಗದಂತೆ ನೋಡಿಕೊಂಡಿದ್ದಾರೆ. ಈ ನಡುವೆ ಕಾಂಪ್ರಮೈಸ್ಗೆ ಒತ್ತಡ ತರುತ್ತಿದ್ದಾನೆ. ಆಗಲ್ಲ ಅಂದ್ರೆ ಬೆದರಿಕೆ ಹಾಕುತ್ತಿದ್ದಾನೆ. ಕೂಡಲೇ ಪೊಲೀಸ್ ಕಾನ್ಸ್‌ಟೇಬಲ್ ತೇಜುರಾಜ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಬೇಕು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ಕಳ ಸಮೇತೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಸುಭಾಷ್ ರಾಠೋಡ ಎಚ್ಚರಿಕೆ ನೀಡಿದ್ದಾನೆ.