ಕಲಬುರಗಿ: ರೈಲು ಹಳಿ ಪಕ್ಕದಲ್ಲೇ ಬೃಹತ್ ಗಾತ್ರದ ಬಂಡೆಕಲ್ಲು ಬಿದ್ದಿರೋದ್ರಿಂದ ಬೀದರ್ನಿಂದ ಕಲಬುರಗಿಗೆ ಸಂಚರಿಸುತ್ತಿದ್ದ ಡೆಮು ಪ್ಯಾಸೆಂಜರ್ ರೈಲು ಸಂಖ್ಯೆ 07746 ಚಾಲಕನ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲೇ ಅಪಾಯದಿಂದ ತಪ್ಪಿದೆ.
ಬೆಳಗ್ಗೆ 7.30 ಕ್ಕೆ ಬೀದರ್ ರೈಲು ನಿಲ್ದಾಣದಿಂದ ಕಲಬುರಗಿಗೆ ಹೊರಟಿದ್ದ ಡೆಮು ಪ್ಯಾಸೆಂಜರ್ ರೈಲು ಮರಗುತ್ತಿ ಬಳಿ ಟನಲ್ (ಸುರಂಗ) ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಬೃಹತ್ ಗಾತ್ರದ ಬಂಡೆಕಲ್ಲು ಗುಡ್ಡದಿಂದ ಉರುಳಿ ರೈಲು ಹಳಿ ಪಕ್ಕದಲ್ಲಿ ಬಿದ್ದಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಬಳಿ ಈ ಅವಘಡ ಸಂಭವಿಸಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ರೈಲು ಟನಲ್ ಪ್ರವೇಶ ಮಾಡಿದೆ. ರೈಲು ಸಂಚರಿಸವಾಗ ಭೂಮಿ ನಡುಗಿ ಕಲ್ಲು ಬಂಡೆ ಉರುಳಿ ಬಿದ್ದಿದೆ ಎನ್ನಲಾಗುತ್ತಿದೆ. ಕೆಲವು ಮುಂಚಿತವಾಗಿಯೇ ಕಲ್ಲು ಬಂಡೆ ಉರುಳಿ ಬಿದ್ದಿತ್ತು ಎಂದೂ ಹೇಳುತ್ತಿದ್ದಾರೆ.
ರೈಲು ಟನಲ್ ಪ್ರವೇಶದ ಬಳಿಕ ಕಲ್ಲು ಬಂಡೆ ಹಳಿ ಪಕ್ಕದಲ್ಲಿ ಬಿದ್ದಿರೋದನ್ನು ಗಮನಿಸಿದ ರೈಲು ಚಾಲಕ ತಕ್ಷಣ ರೈಲು ನಿಲ್ಲಿಸಿದ್ದು, ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 1000 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾದಂತಾಗಿದೆ. ಎರಡು ಗಂಟೆಗಳ ಕಾಲ ರೈಲು ನಿಲ್ಲಿಸಿರೋದ್ರಿಂದ ಪ್ರಯಾಣಿಕರು ಪರದಾಡಿದರೆ, ಕೆಲವರು ಹೊಲ ಗದ್ದೆಗಳ ಮೂಲಕ ಒಂದೆರಡು ಕೀಲೋಮೀಟರ್ಗಟ್ಟಲೆ ದೂರ ನಡೆದುಕೊಂಡು ಮುಖ್ಯ ರಸ್ತೆಗೆ ಬಂದು ವಾಹನಗಳ ಮೂಲಕ ಕಲಬುರಗಿಗೆ ಬಂದಿದ್ದಾರೆ.
ಘಟನೆಯಿಂದ ಎರಡು ಗಂಟೆಗಳ ಕಾಲ ನಿಂತಲ್ಲೇ ನಿಂತಿದ್ದ ಪ್ಯಾಸೆಂಜರ್ ರೈಲು, ರೈಲ್ವೆ ಸಿಬ್ಬಂದಿ ಕಲ್ಲು ಬಂಡೆ ತೆರವುಗೊಳಿಸಿದ ಬಳಿಕ ಸಂಚಾರ ಮುಂದುವರೆಸಿದೆ. ಒಟ್ಟಿನಲ್ಲಿ ಸ್ವಲ್ಪದರಲ್ಲೇ ಸಂಭವಿಸಬಹುದಾದ ರೈಲು ದುರಂತ ತಪ್ಪಿದಂತಾಗಿದ್ದು, ಕಲ್ಲು ಬಂಡೆ ಉರುಳಿ ರೈಲು ಹಳ್ಳಿ ಪಕ್ಕಕ್ಕೆ ಬಂದು ಬಿದ್ದಿದ್ದು ಹೇಗೆ ಅನ್ನೋದು ಸೂಕ್ತ ತನಿಖೆ ನಂತರವಷ್ಟೇ ಬೆಳಕಿಗೆ ಬರಬೇಕಿದೆ.
ಇದನ್ನೂ ಓದಿ: ಮತ್ತೊಂದು ರೈಲು ದುರಂತ: ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಹಳಿತಪ್ಪಿದ ಗೂಡ್ಸ್ ರೈಲಿನ 2 ಬೋಗಿಗಳು