ಕಲಬುರಗಿ: ನಿರ್ಗತಿಕರು ಮತ್ತು ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ವಿವಿಧ ಯೋಜನೆಗಳ ಅಡಿ ಕಲಬುರಗಿ ಹೊರವಲಯದ ಕೆಸರಟಗಿ ಬಳಿ ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, ಸೌಕರ್ಯಗಳಿಲ್ಲದೇ ಆ ಮನೆಗಳು ಅವ್ಯವಸ್ಥೆಯಿಂದ ಕೂಡಿದ್ದು, ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ 1,300ಕ್ಕೂ ಹೆಚ್ಚು ಆಶ್ರಯ ಮನೆಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ, ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಯಿಂದ ಪರದಾಡುತ್ತಿದ್ದೇವೆ. ಅಷ್ಟಲ್ಲದೇ, ರಸ್ತೆ ಸಂಪರ್ಕ ಕೂಡ ಇಲ್ಲ. ಅಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ಅಳಲಾಗಿದೆ.
ಆಶ್ರಯ ಕಾಲೊನಿಯಲ್ಲಿ ಬಹುತೇಕ ಮನೆಗಳು ಕಳಪೆ ಮಟ್ಟದಿಂದ ಕೂಡಿವೆ. ಈಗಾಗಲೇ ಭಾಗಶಃ ಮನೆಗಳು ಬಿರುಕು ಬಿಟ್ಟಿವೆ. ಮಳೆ ಬಂದರೆ ಸೋರುತ್ತವೆ. ಮನೆಯಲ್ಲಿದ್ದೆವೋ ಅಥವಾ ನೀರಿನಲ್ಲಿ ವಾಸವಿದ್ದೆವೋ ಎಂಬಂತಾಗಿದೆ. ಒಟ್ಟಿನಲ್ಲಿ ಭಯದಲ್ಲೇ ಕಾಲ ಕಳೆಯುತ್ತಿದ್ದೇವೆ ಎಂಬುದು ನಿವಾಸಿಗಳ ಆತಂಕದ ಮಾತು.
ಯಾವುದೇ ಮೂಲ ಸೌಕರ್ಯವಿಲ್ಲ ಬಸ್ ಸಂಚಾರವಿಲ್ಲ. ಕಾಲೊನಿಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಬಸ್ ನಿಲ್ದಾಣವಿದೆ. ನಿತ್ಯ ದುಡಿಯಲು ಕಲಬುರಗಿಗೆ ಹೋಗಲೇಬೇಕು. ಆದರೆ, ಅಲ್ಪ ಲಾಭದಲ್ಲಿ ಬದುಕುವುದು ಕಷ್ಟವಾಗಿದೆ. ಹೀಗಿರುವಾಗ ನೂರಾರು ರೂಪಾಯಿ ಆಟೋಕ್ಕಾಗಿ ಖರ್ಚು ಮಾಡುವುದು ಅನಿವಾರ್ಯವಾಗಿದೆ ಎಂದು ನಿವಾಸಿಗಳು ಈಟಿವಿ ಭಾರತದ ಮುಂದೆ ನೋವು ತೋಡಿ ಕೊಂಡಿದ್ದಾರೆ.
ಮಕ್ಕಳಿಗೆ ಶಾಲೆಯೂ ಇಲ್ಲ. ಮತ್ತೊಂದಡೆ ಸಮರ್ಪಕವಾಗಿ ಮನೆ ಹಂಚಿಕೆ ಮಾಡಿಲ್ಲ. ಹಣವಂತರು ಯೋಜನೆ ಲಾಭ ಪಡೆದಿದ್ದು, ಆಗಾಗ ಬಂದು ವಾಸ ಇರುವವರ ಜೊತೆ ಜಗಳವಾಡಿ ಹೋಗುತ್ತಾರೆ. ಇಲ್ಲಿ ಒಂದಿಷ್ಟು ಮಂದಿ ಅರ್ಹರಿದ್ದಾರೆ. ಅವರಿಗೂ ಮನೆ ನೀಡಬೇಕು. ಈ ಬಗ್ಗೆ ಮಹಾನಗರ ಪಾಲಿಕೆಗೆ ಎಷ್ಟು ಬಾರಿ ಹೇಳಿದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.