ಕಲಬುರಗಿ/ಮಂಗಳೂರು: ಹಿಜಾಬ್ ವಿವಾದ ಕುರಿತು ಮಂಗಳವಾರ ಹೈಕೋರ್ಟ್ನಿಂದ ಮಹತ್ವದ ತೀರ್ಪು ಹೊರ ಬೀಳಲಿದೆ. ಹೀಗಾಗಿ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಕಲಂ144 ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಯಶವಂತ ಗುರಿಕಾರ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ರಾತ್ರಿ 8 ಗಂಟೆಯಿಂದ ಮಾರ್ಚ್19ರ ಬೆಳಗ್ಗೆ 6 ಗಂಟೆ ವರೆಗೆ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿ ಇರಲಿದೆ. ತೀರ್ಪಿನ ಬಳಿಕ ವಿಜಯೋತ್ಸವ ಮತ್ತು ಪ್ರತಿಭಟನೆಗೆ ಯಾವುದೇ ಅವಕಾಶ ಇರುವುದಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಬಿಗಿ ಬಂದೊಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಹಿಜಾಬ್ ಧರಿಸುವ ವಿಚಾರದಲ್ಲಿ ಮಂಗಳವಾರ ಹೈಕೋರ್ಟ್ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಶಾಲಾ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ರಜೆ ಘೋಷಿಸಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ನಡೆಯುವ ಆಂತರಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇತರ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿದೆ. ನಾಳೆ ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ಆಯೋಜಿಸಿರುವ ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ: ನಾಳೆ ಹೈಕೋರ್ಟ್ನಿಂದ ಅಂತಿಮ ತೀರ್ಪು