ಕಲಬುರಗಿ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದೇ ಜೂ. 22 ರಂದು ತಾಲೂಕಿನ ಹೇರೂರ(ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆ ಯಾವುದೇ ಲೋಪವಾಗದಂತೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಇಲಾಖಾವಾರು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನತಾ ದರ್ಶನ ಕಾರ್ಯಕ್ರಮ ಮುಖ್ಯಮಂತ್ರಿಗಳ ಇಷ್ಟದ ಕಾರ್ಯಕ್ರಮವಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ್ದಾಗಿದೆ. ಸುಮಾರು 8-10 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಮಳೆ ಬಂದರೂ, ಯಾವುದೇ ತೊಂದರೆಯಾಗದಂತೆ ಜನತಾ ದರ್ಶನ ನಡೆಯುವ ಕಾರ್ಯಕ್ರಮ ಸ್ಥಳವನ್ನು ವಾಟರ್ ಪ್ರೂಪ್ ವ್ಯವಸ್ಥೆಯಿಂದ ನಿರ್ಮಿಸಲಾಗಿದೆ. ಜೊತೆಗೆ ಬಂದಂತಹ ಅರ್ಜಿದಾರರು ಬಿಸಿಲಿನಿಂದ ಪರಿತಪಿಸದಂತೆ ಪಕ್ಕದಲ್ಲೇ ವಿಶಾಲವಾದ ಶಾಮಿಯಾನ ಕೂಡ ಹಾಕಲಾಗಿದೆ. ಸಾರ್ವಜನಿಕರ ವಾಹನಗಳು ಹಾಗೂ ಗಣ್ಯರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳ ನಿಲುಗಡೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗಾಗಿ 50 ಕಡೆ ಊಟದ ಸ್ಟಾಲ್ ವ್ಯವಸ್ಥೆ ಮಾಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಎಂಜಿನಿಯರ್ ಅವರಿಗೆ ಸೂಚಿಸಿದರು. ವಿಕಲಚೇತನರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದ್ದು, ಮುಖ್ಯಮಂತ್ರಿಗಳ ಭೇಟಿಗೂ ಇವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 20ಕ್ಕೂ ಹೆಚ್ಚು ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇಲಾಖಾವಾರು ಸುಮಾರು 40 ವಸ್ತು ಪ್ರದರ್ಶನ ಮಳಿಗೆ ತೆರೆಯಲಾಗುತ್ತಿದ್ದು, ಇವುಗಳ ಮೂಲಕ ಸಾರ್ವಜನಿಕರಿಗೆ ಆಯಾ ಇಲಾಖೆಗಳಲ್ಲಿ ಇರುವ ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಹಾಗೂ ಅರ್ಜಿ ಸಲ್ಲಿಕೆ ವಿಧಾನ ಮುಂತಾದವುಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಜನತಾ ದರ್ಶನಕ್ಕೆ ಬರುವ ಸಾರ್ವಜನಿಕರಿಗಾಗಿ ಹೆಲ್ಪ್ ಡೆಸ್ಕ್, ಅರ್ಜಿ ಸ್ವೀಕೃತಿ ಕೌಂಟರ್ ಹಾಗೂ ರಿಜಿಸ್ಟ್ರೇಷನ್ ಕೌಂಟರ್ ತೆರೆಯಲಾಗಿದೆ. ರಿಜಿಸ್ಟ್ರೇಷನ್ ಕೌಂಟರ್‍ನಲ್ಲಿ ನೀಡುವ ಟೋಕನ್ ನಂಬರ್ (ರೆಫೆರೆನ್ಸ್ ಸಂಖ್ಯೆ) ಇದ್ದಲ್ಲಿ ಮಾತ್ರ ಸಿಎಂ ಜನತಾ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ತಿಳಿಸಿದ ಅವರು, ರೆಫೆರೆನ್ಸ್ ಸಂಖ್ಯೆಯಿಂದ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿ-ಗತಿ ಕೂಡ ತಿಳಿಯಬಹುದಾಗಿದೆ ಎಂದು ಅವರು ತಿಳಿಸಿದರು.
ಆಯಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಇಟ್ಟುಕೊಂಡಿರಬೇಕು. ಜನತಾ ದರ್ಶನ ಸಂದರ್ಭದಲ್ಲಿ ತಮ್ಮ ಇಲಾಖೆಗಳ ಬಗ್ಗೆ ಅರ್ಜಿದಾರರು ಸಮಸ್ಯೆಗಳ ಬಗ್ಗೆ ಅರ್ಜಿ ನೀಡುವಾಗ ಸಂಬಂಧಪಟ್ಟ ಅಧಿಕಾರಿಗಳು ವೇದಿಕೆ ಮೇಲೆ ಬಂದು ಸಮಸ್ಯೆಗಳ ಕುರಿತು ವಿವರಣೆ ನೀಡಬೇಕು ಎಂದು ಅವರು ಸೂಚಿಸಿದರು.
ಫಲಾನುಭವಿಗಳಿಗೆ ಸಿಎಂ ಚೆಕ್ ವಿತರಣೆ:
ಜನತಾ ದರ್ಶನಕ್ಕೂ ಮುನ್ನ ಸುಮಾರು ಅರ್ಧ ಗಂಟೆ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಚೆಕ್, ವಾಹನಗಳ ಕೀಲಿ ಕೈ ಮುಂತಾದ ಹಲವು ಸವಲತ್ತುಗಳನ್ನು ವಿತರಿಸಲಾಗುತ್ತಿದ್ದು, ಈ ಸಂಬಂಧ ಫಲಾನುಭವಿಗಳನ್ನು ಆಯಾ ಇಲಾಖೆಗಳು ಕರೆ ತರಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯಿಂದ 264 ಫಲಾನುಭವಿಗಳಿಗೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಹೊಲಿಗೆ ಯಂತ್ರ, ಅಂಗವಿಕಲರಿಗೆ ಝೆರಾಕ್ಸ್ ಮಷಿನ್ ವಿತರಣೆ, ಕೃಷಿ ಇಲಾಖೆಯಿಂದ 100 ಜನಕ್ಕೆ ಕೃಷಿ ಭಾಗ್ಯ, 25 ಜನಕ್ಕೆ ಡಿಜಿಟಲ್ ಇಂಜಿನ್, ಕೃಷಿ ಯಂತ್ರ, ಟ್ರ್ಯಾಕ್ಟರ್, ಕೃಷಿ ಸಲಕರಣೆ ಮುಂತಾದವುಗಳನ್ನು ಮುಖ್ಯಮಂತ್ರಿಗಳು ವಿತರಣೆ ಮಾಡುವರು ಎಂದು ಅವರು ವಿವರಿಸಿದರು.