ಕಲಬುರಗಿ: ಜಿಲ್ಲೆಯಲ್ಲಿ ಮಳೆಯ ಅರ್ಭಟ ಮುಂದುವರೆದಿದೆ. ಭಾರೀ ಮಳೆಯಿಂದ ಹಲವೆಡೆ ಸಾವು-ನೋವು, ಆಸ್ತಿ-ಪಾಸ್ತಿಗೆ ಹಾನಿ ಸಂಭವಿಸಿದೆ.
ಆಳಂದ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಕಲಬುರಗಿ ಜೆಸ್ಕಾಂ ಕಚೇರಿಯಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಿದ್ದರಾಮ ಆವುಟೆ ಎಂಬಾತ ಕಾರಿನಲ್ಲಿ ತನ್ನ ಊರು ಯಳಸಂಗಿಗೆ ತೆರಳುವಾಗ ಬೊಮ್ಮನಹಳ್ಳಿ ಗ್ರಾಮದ ಬಳಿ ಹಳ್ಳದ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದ. ಸಿದ್ದರಾಮನ ಜೊತೆಗಿದ್ದ ರಾಜು ಕುಂಬಾರ್ ಎಂಬಾತನನ್ನು ನಿಂಬರ್ಗಾ ಠಾಣೆ ಪೊಲೀಸರು ರಕ್ಷಿಸಿದ್ದರು. ಕೊಚ್ಚಿ ಹೋಗಿದ್ದ ಸಿದ್ದರಾಮನಿಗಾಗಿ ಹುಡುಕಾಟ ನಡೆಸಲಾಗಿತ್ತು. ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಮನೆಯಲ್ಲಿ ಹಾವು ಪ್ರತ್ಯಕ್ಷ: ವರುಣನ ಅರ್ಭಟದಿಂದ ಜಿಲ್ಲೆಯ ಹಲವೆಡೆ ಹೊಲ, ಮನೆಗಳು ಜಲಾವೃತಗೊಂಡಿವೆ. ವಾಡಿ ಪಟ್ಟಣದ ರೈಲ್ವೆ ಕಾಲೋನಿಯ ಪೊಟರ್ ಚಾಳಿಯ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಹೈರಾಣಾಗಿದ್ದಾರೆ. ಶಾಂತಮ್ಮ ಎಂಬುವರ ಮನೆಯೊಳಗೆ ಮಳೆ ನೀರಿನ ಜೊತೆಗೆ ಹಾವೊಂದು ನುಗ್ಗಿ, ಮನೆಯವರಲ್ಲಿ ಆತಂಕ ಸೃಷ್ಟಿಸಿತ್ತು. ಸುಮಾರು ಒಂದು ಗಂಟೆ ಕಾಲ ಮನೆಯಲ್ಲಿ ಓಡಾಡಿದ ಹಾವು, ನಂತರ ನೀರಿನಲ್ಲಿ ಕೊಚ್ಚಿ ಹೋಗಿದೆ.
ದುಸ್ಸಾಹಸಕ್ಕೆ ಕೊಚ್ಚಿ ಹೋದ ಟ್ರ್ಯಾಕ್ಟರ್: ಆಳಂದ ಸಾಲೇಗಾಂವ ಗ್ರಾಮದಲ್ಲಿ ಹರಿಯುತ್ತಿರುವ ನೀರಿನಲ್ಲಿ ಟ್ರ್ಯಾಕ್ಟರ್ ದಾಟಿಸುವ ದುಸ್ಸಾಹಸ ಮಾಡಲು ಹೋಗಿ ಮೂವರು ಟ್ರ್ಯಾಕ್ಟರ್ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಅದೃಷ್ಟವಶಾತ್ ಅವರು ಈಜಿ ದಡ ಸೇರುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಸ್ತೆ ಸಂಪರ್ಕ ಕಡಿತ: ವರುಣನ ಅರ್ಭಟಕ್ಕೆ ಜಿಲ್ಲೆಯ ಹಲವು ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ವಾಗ್ಧರಿ ರಿಬ್ಬನಪಲ್ಲಿ ಹೆದ್ದಾರಿಯ ಸೇಡಂ ತಾಲೂಕಿನ ಮಳಖೇಡ ಸೇತುವೆ ಮೇಲೆ ಕಾಗಿಣಾ ನದಿ ನೀರು ಹರಿಯುತ್ತಿದ್ದು, ಚಿಂಚೋಳಿ-ಬೀದರ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಂಚೋಳಿ-ತಾಂಡೂರ, ವಾಡಿ-ಶಹಾಬಾದ, ದಂಡೋತಿ-ಚಿತ್ತಾಪೂರ ಸೇರಿ ಹಲವು ಪ್ರಮುಖ ರಸ್ತೆಗಳ ಸಂಪರ್ಕ ಕೂಡ ಕಡಿತಗೊಂಡಿದೆ.