ಕಲಬುರಗಿ: ಜಿಲ್ಲೆಯಾದ್ಯಂತ ನಿನ್ನೆ ಮಧ್ಯಾಹ್ನದಿಂದ ರಾತ್ರಿಯಿಡೀ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ಮಳೆಯಿಂದ ಅನಾಹುತ ಸಂಭವಿಸಿವೆ.
ಚಿಂಚೋಳಿ ತಾಲೂಕಿನಾದ್ಯಂತ ಅತೀ ಹೆಚ್ಚು ಮಳೆ ಸುರಿದಿದೆ. ಪರಿಣಾಮ ಚಿಮ್ಮನಚೋಡು ಗ್ರಾಮದ ಸುತ್ತಮುತ್ತ ಸೇತುವೆ, ರಸ್ತೆಗಳು ಜಲಾವೃತಗೊಂಡಿವೆ. ಸೇತುವೆಗಳ ಮೇಲಿಂದ ನೀರು ಹರಿದ ಕಾರಣ ರಸ್ತೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಕಾಳಗಿ ತಾಲೂಕಿನ ರುಮ್ಮನಗೂಡನಲ್ಲಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ. ಗಣಪತಿ ಕಾರಬಾರಿ ಎಂಬುವರಿಗೆ ಸೇರಿದ ಹಸುಗಳು ಇವಾಗಿದ್ದು, ಹಸು ಕಳೆದುಕೊಂಡ ರೈತನ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಿದೆ.
ಅಫಜಲಪುರ ತಾಲೂಕಿನ ದಿಕ್ಕ್ಸಂಗಾ(ಕೆ) ಗ್ರಾಮದ ಶರಣಪ್ಪ ನಾಟೀಕಾರ ಎಂಬುವರಿಗೆ ಸೇರಿದ ಎತ್ತು ಸಿಡಿಲು ಬಡಿದು ಮೃತಪಟ್ಟಿದೆ. ಜಮೀನಿನಲ್ಲಿ 2 ಎತ್ತುಗಳನ್ನು ಗಿಡದ ಕೆಳಗೆ ಕಟ್ಟಲಾಗಿತ್ತು. ಒಂದು ಎತ್ತು ಸಿಡಿಲಿನ ಶಬ್ದಕ್ಕೆ ಹಗ್ಗ ಹರಿದುಕೊಂಡು ಓಡಿ ಹೋಗಿದೆ. ಇನ್ನೊಂದು ಎತ್ತು ಸ್ಥಳದಲ್ಲಿಯೇ ಮೃತಪಟ್ಟಿದೆ.
![kalburagi](https://etvbharatimages.akamaized.net/etvbharat/prod-images/11998090_thum.jpg)
ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡು ಇಡೀ ರಾತ್ರಿ ಕತ್ತಲಲ್ಲಿ ಕಾಲ ಕಳೆಯುವಂತಾಯಿತು. ಕಲಬುರಗಿ ನಗರ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಸಾಮಗ್ರಿಗಳು ನೀರುಪಾಲಾಗಿವೆ.
ಮತ್ತೊಂದಡೆ ಮುಂಗಾರಿನ ಆರಂಭದಲ್ಲಿಯೇ ಭಾರೀ ಮಳೆಯಾಗುತ್ತಿದ್ದು, ಹೊಲಗಳು ಹಸಿಯಾಗಿ ಬಿತ್ತನೆಗೆ ಅಣಿಯಾಗಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.