ಕಲಬುರಗಿ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೊಂದೆಡೆ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸಿಡಿಲು ಬಡಿದು ಒಂದು ಪ್ರಾಣ ಹಾನಿ ಸಂಭವಿಸಿದ್ದು, ಕೆಲವು ಜಾನುವಾರುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದು ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲೇ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಇಂದು ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಎಡಬಿಡದೇ ಮಳೆ ಸುರಿದಿದೆ.
ಸಿಡಿಲು ಬಡಿದು ಮಹಿಳೆ ಸಾವು.. ಮತ್ತೊಬ್ಬರಿಗೆ ಗಾಯ : ಅಫಜಲಪುರ ತಾಲೂಕಿನ ಸಿದನೂರು ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕಲಾವತಿ ಚಿಕ್ಕರೇವೂರ (35) ಮೃತ ಮಹಿಳೆ. ಇವರ ಜೊತೆಯಲ್ಲಿದ್ದ ಸವೀತಾ ರೇವೂರ ಎಂಬುವರಿಗೆ ಗಂಭೀರ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ವಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಸಂಜೀವ್ ಕುಮಾರ್ ದಾಸರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹಳ್ಳ ದಾಟಲು ಹೋಗಿ ಕೊಚ್ಚಿಹೋದ ವ್ಯಕ್ತಿ : ಚಿಂಚೋಳಿ ತಾಲೂಕಿನ ದೊಟಿಕೋಳ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಜಲಾವೃಗೊಂಡಿದ್ದ ರಸ್ತೆ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋದ ಮಾರುತಿ ಎಂಬವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ರಸ್ತೆ ಜಲಾವೃತಗೊಂಡ ಪರಿಣಾಮ ಕನಕಪುರ ಚಿಮ್ಮನಚೋಡ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
150ಕ್ಕೂ ಹೆಚ್ಚು ಮೇಕೆಗಳು ಸಾವು : ಮಳೆಯ ಅಬ್ಬರಕ್ಕೆ ಕುರಿದೊಡ್ಡಿಯ ಗೋಡೆ ಕುಸಿದು 150ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ಕೊರವಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಹಾಗೂ ಅಣಪ್ಪ ಎಂಬುವರಿಗೆ ಸೇರಿದ ಕುರಿದೊಡ್ಡಿಯ ಗೋಡೆ ಕುಸಿದುಬಿದ್ದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿತ್ತಾಪುರ ತಾಲೂಕಿನ ರಾಜೋಳ ಗ್ರಾಮದಲ್ಲಿ ಶಿವಪ್ಪ ಪೂಜಾರಿ ಎಂಬುವರಿಗೆ ಸೇರಿದ 11 ಮೇಕೆಗಳು ಸಿಡಿಲು ಬಡಿದು ಮೃತಪಟ್ಟಿವೆ. ಮಳೆ ಹಿನ್ನೆಲೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತಪಟ್ಟಿವೆ.
ಮಳೆ ನೀರು ನಿಂತು ಕೆರೆಯಂತಾದ ಸೇಡಂ ಠಾಣೆ : ಭಾರಿ ಮಳೆಗೆ ಸೇಡಂ ಪೊಲೀಸ್ ಠಾಣೆ ಜಲಾವೃತಗೊಂಡಿದೆ. ಇದರಿಂದಾಗಿ ಪೊಲೀಸರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸೇಡಂ ಪಟ್ಟಣದಲ್ಲಿ ಬಿಟ್ಟು ಬಿಡದೇ ಮಳೆ ಸುರಿದ ಪರಿಣಾಮ ಠಾಣೆಗೆ ನೀರು ನುಗ್ಗಿದೆ. ತೊಟನಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಮಳೆಯ ನೀರು ನುಗ್ಗಿದ್ದು, ಮೈದಾನ ಸಂಪೂರ್ಣ ಜಲಾವೃತಗೊಂಡಿತ್ತು.
ಗೋಡೆ ಕುಸಿದು ಇಬ್ಬರಿಗೆ ಗಾಯ : ಮಳೆಯಿಂದಾಗಿ ಚಿತ್ತಾಪುರ ಪಟ್ಟಣದಲ್ಲಿ ಮನೆ ಗೋಡೆ ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ತೊನಸನಳ್ಳಿ, ದಂಡೋತಿ, ಮಲಕೂಡ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ದವಸಧಾನ್ಯ ಹಾಳಾಗಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ : Rain alert: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ.. ಈ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ