ಕಲಬುರಗಿ: ಬೆಳೆ ಹಾನಿಗೆ ಸರ್ಕಾರದಿಂದ ಪರಿಹಾರ ಬರಲಿಲ್ಲ, ಸಾಲ ಮಾಡಿದ್ದೇವೆ ಎಂದು ರೈತರು ಜೀವ ಕಳೆದುಕೊಳ್ಳಬೇಡಿ. ಇನ್ನೊಂದು ನಾಲ್ಕು ತಿಂಗಳು ಸಹಿಸಿಕೊಳ್ಳಿ. ಆ ಬಳಿಕ ನಾನೇ ನಿಮ್ಮ ಬಳಿ ಬಂದು ಕಷ್ಟ ಬಗೆಹರಿಸುತ್ತೇನೆ. ರೈತರ ಬದುಕಿಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
193 ಕೋಟಿ ರೂ ಬೆಳೆ ವಿಮೆಯ ಹಣವನ್ನು ರೈತರು ಕಟ್ಟಿದ್ದಾರೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಲ್ಲಿ ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ. ಇನ್ಸೂರೆನ್ಸ್ ಕಂಪನಿ 28 ಕೋಟಿ ರೂ ಕೊಟ್ಟಿದೆಯೇ ಹೊರತು ಅವರ ಅಪ್ಪನ ಮನೆಯಿಂದ ಕೊಡ್ತಿಲ್ಲ ಎಂದು ಮಾಜಿ ಸಿಎಂ ಗುಡುಗಿದರು.
ಕಲಬುರಗಿ ಜಿಲ್ಲೆ ನಿಡಗುಂದಾ ಗ್ರಾಮದಲ್ಲಿ ಮಾತನಾಡಿದ ಹೆಚ್‌ಡಿಕೆ, ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗಿವೆ. ಕಲಬುರಗಿಯಲ್ಲಿ 7 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆ ನಷ್ಟವಾಗಿ ರೈತರು ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಆದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು. ಈ ಸರ್ಕಾರದಲ್ಲಿ ಪರಿಹಾರ ಬರಲಿಲ್ಲ ಅಂದ್ರೆ ನಾಲ್ಕು ತಿಂಗಳ ಧೈರ್ಯದಿಂದ ಕಾಲ ತಳ್ಳಿ, ಆತ್ಮಹತ್ಯೆಗೆ ಶರಣಾಗಬೇಡಿ. ಆ ಬಳಿಕ ನಾನೇ ನಿಮ್ಮ ಕಷ್ಟ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಪಂ.ಸದಸ್ಯ ಮಾಡಬೇಕಾದ ಕೆಲಸಕ್ಕೆ ಪ್ರಧಾನಿ ಕರೆಸ್ತಾರೆ: ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಜ.19 ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ವಿಚಾರವಾಗಿ ಮಾತನಾಡಿದ ಹೆಎಚ್‌ಡಿಕೆ, ಇದು ಒಬ್ಬ ಗ್ರಾಮ ಪಂಚಾಯತ್ ಸದಸ್ಯ ಮಾಡಬೇಕಾದ ಕೆಲಸ. ಈ ಕೆಲಸಕ್ಕೆ ಪ್ರಧಾನಿಯನ್ನು ಕರೆಸುತ್ತಿದ್ದಾರೆ. ಬಿಜೆಪಿಯನ್ನು ದೇವರೇ ಕಾಪಾಡಬೇಕು. ಸಾವಿರಾರು ಕೋಟಿ ರೂ. ಯೋಜನೆಗಾಗಿ ಕರೆದುಕೊಂಡು ಬಂದಿದ್ರೆ ಒಪ್ಪಬೇಕಿತ್ತು. ಅದು ಬಿಟ್ಟು ತಾಂಡಾ ಜನರಿಗೆ ಹಕ್ಕು ಪತ್ರ ವಿತರಣೆಗೆ ಮೋದಿಯನ್ನು ಕರೆಸುತ್ತಿದ್ದಾರೆ. 60 ಎಕರೆಯಲ್ಲಿ ಬೃಹತ್ ಪೆಂಡಾಲ್ ಹಾಕಿ ಹಕ್ಕು ಪತ್ರ ಕೊಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿ: ಕುಮಾರಸ್ವಾಮಿ ಪಾರ್ಟಿ ಎಂದರೆ ಅದು 'ಫಾರ್ ದಿ ಫ್ಯಾಮಿಲಿ' 'ಆಫ್ ದಿ ಫ್ಯಾಮಿಲಿ' ಮತ್ತು 'ಬೈ ದಿ ಫ್ಯಾಮಿಲಿ' ಥರ ಎಂದು ವ್ಯಂಗ್ಯವಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕುಮಾರಸ್ವಾಮಿ ಕೆಂಡ ಕಾರಿದರು. ನಮ್ಮ ಬಗ್ಗೆ ಹಗುರವಾಗಿ ಮಾತಾಡಬೇಡಿ, ನನ್ನ ಕುಟುಂಬದ ಬಗ್ಗೆ ವ್ಯಂಗ್ಯವಾಡಬೇಡಿ, ರಾಜ್ಯದ ಆರುವರೆ ಕೋಟಿ ಜನರು ಕೂಡ ನನ್ನ ಕುಟುಂಬವೇ ಎಂದು ಹೇಳಿದರು. ಇದೇ ವೇಳೆ ಮಹದಾಯಿ ವಿಚಾರದಲ್ಲಿ ನಾನು ಏನು ಕ್ರಮ ತೆಗೆದುಕೊಂಡಿದ್ದೇನೆ ಅನ್ನೋದು ಹುಬ್ಬಳ್ಳಿಯಲ್ಲಿ ಮಾತಾಡುತ್ತೇನೆ ಎಂದು ಹೇಳಿದರು.
ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ: ಜಗದೀಶ್ ಅನ್ನೋ ವ್ಯಕ್ತಿ ಕಳೆದ ವರ್ಷ ಜ.22 ರಂದು ಸ್ಯಾಂಟ್ರೋ ರವಿ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಡ್ತಾರೆ. ಆಗ ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತ ಅಂತಾ ಸ್ಯಾಂಟ್ರೋ ರವಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಬಿಜೆಪಿಯ ಶಾಸಕರು, ಸಚಿವರ ಜೊತೆ ನನಗೆ ಒಡನಾಟ ಇದೆ. ಹಾಗಾಗಿ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದೇನೆ ಎಂದು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಆ ಮುಚ್ಚಳಿಕೆಯಲ್ಲಿ ವರ್ಗಾವಣೆ ಮಾಡಿಸಿದ ಅಧಿಕಾರಿಗಳ ಪಟ್ಟಿ ಬರೆದಿದ್ದಾರೆ.
ಒಂದು ವರ್ಷದಿಂದ ಬಿಟ್ಟು ಈಗ ಅರೆಸ್ಟ್ ಮಾಡ್ತೇವೆ ಎಂದು ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ. ಇವರು ಪವಿತ್ರ ಕೇಸರಿ ಬಟ್ಟೆ ಇಟ್ಟುಕೊಂಡು ರಾಜಕಾರಣ ಮಾಡ್ತಿದ್ದಾರೆ. ಸ್ಯಾಂಟ್ರೋ ರವಿ, ಸೈಲೆಂಟ್ ಸುನೀಲ್, ಫೈಟರ್ ರವಿ ಅಂಥವರ ಹೆಗಲ ಮೇಲೆ ಇವರು ಕೇಸರಿ ಹಾಕಿದ್ದಾರೆ. ಪವಿತ್ರ ಕೆಸರಿ ಬಟ್ಟೆ ಹಾಕಿ ಅದರ ಪಾವಿತ್ರ್ಯತೆ ಹಾಳು ಮಾಡ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ಸಂಕ್ರಾಂತಿ ದಿನ ಕುಮಾರಣ್ಣ ಜೊತೆ": ಸಂಕ್ರಾಂತಿಯಂದು ರೈತರ ಜೊತೆ ಕುಮಾರಸ್ವಾಮಿ ವರ್ಚುವಲ್ ಸಭೆ ಮಾಡುವುದಾಗಿ ತಿಳಿಸಿದ್ದಾರೆ. ಜ.16 ರಂದು ಸಂಕ್ರಾಂತಿಯ ದಿನ ಬೆಳಿಗ್ಗೆ 11 ಗಂಟೆಯಿಂದ ವರ್ಚುವಲ್ ಸಭೆ ನಡೆಯಲಿದ್ದು, ನಾಡಿನ 50 ವಿಧಾನಸಭಾ ಕ್ಷೇತ್ರದ ರೈತರು ವರ್ಚುವಲ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪಂಚರತ್ನ ಯೋಜನೆಯ ರೈತ ಚೈತನ್ಯ ಕಾರ್ಯಕ್ರಮದ ಅಂಗವಾಗಿ ಸಂಕ್ರಾಂತಿ ದಿನ ರೈತರೊಂದಿಗೆ ಸಂವಾದ ಮಾಡಲಾಗುತ್ತಿದೆ. "ಸಂಕ್ರಾಂತಿ ದಿನ ಕುಮಾರಣ್ಣ ಜೊತೆ" ಸಂವಾದ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿದರು.
2ನೇ ಹಂತದ ಪಂಚರತ್ನ ರಥಯಾತ್ರೆ ಅಂತ್ಯ: ಸಂಕ್ರಾಂತಿ ಹಬ್ಬದ ಅಂಗವಾಗಿ ಜ.13 ರಂದು ಎರಡನೇ ಹಂತದ ಪಂಚರತ್ನ ರಥಯಾತ್ರೆ ಮುಕ್ತಾಯಗೊಳಿಸುವುದಾಗಿ ಕುಮಾರಸ್ವಾಮಿ ಹೇಳಿದರು. ಎರಡನೇ ಹಂತದಲ್ಲಿ ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ಹಲವೆಡೆ ಯಾತ್ರೆ ತೆರಳಿತು ಎಂದು ಅವರು ತಿಳಿಸಿದರು. ರಾಜ್ಯ ವಿಧಾನಸಭೆಗೆ ನಡೆಯಲಿರುವ ಮುಂದಿನ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಎಲ್ಲ ರಾಜಕೀಯ ಪಕ್ಷಗಳು ಮೈಕೊಡವಿ ಮತದಾರರ ಮನವೊಲಿಕೆ ಕಸರತ್ತು ನಡೆಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಸ್ವತಂತ್ರವಾಗಿ ಆಡಳಿತ ನಡೆಸಲು ಜೆಡಿಎಸ್‌ಗೆ ಅವಕಾಶ ಕೊಡಿ: ಹೆಚ್.ಡಿ.ಕುಮಾರಸ್ವಾಮಿ ಮನವಿ