ಕಲಬುರಗಿ : ಕುಲಸಚಿವರಾಗಿ ಸೇವೆ ಸಲ್ಲಿಸಲು ಜೀವ ಭಯವಿದೆ, ಸೂಕ್ತ ರಕ್ಷಣೆ ನೀಡಿ ಎಂದು ಕಲಬುರಗಿ ಕಮಿಷನರ್ಗೆ ಗುಲ್ಬರ್ಗ ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ ಸೋಮಶೇಖರ್ ಮನವಿ ಮಾಡಿದ್ದಾರೆ.
ಈ ಕುರಿತು ಪೊಲೀಸ್ ಕಮಿಷನರ್ಗೆ ಪತ್ರ ಬರೆದಿರುವ ಅವರು, ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ. ಕುಲಸಚಿವರಾಗಿ ಕಾರ್ಯಭಾರ ಮುಂದುವರೆಸಲು ಭಯವಾಗುತ್ತಿದೆ. ಇದರಿಂದಾಗಿ ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಲು ಅಡಚಣೆಯಾಗುತ್ತಿದೆ. ವಿಶ್ವವಿದ್ಯಾನಿಲಯಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳಿಂದ ಆಡಳಿತಾತ್ಮಕ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುವಂತೆ ಒತ್ತಡ ತರಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗಷ್ಟೇ ಪ್ರಾಧ್ಯಾಪಕರೊಬ್ಬರ ಮೇಲೆ ಮತ್ತೊಬ್ಬ ಪ್ರಾಧ್ಯಾಪಕರಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿತ್ತು. ಇದೀಗ ತಮಗೆ ಜೀವ ಬೆದರಿಕೆ ಇದೆ ಎಂದು ಕುಲಸಚಿವರು ಪೊಲೀಸ್ ಇಲಾಖೆಗೆ ಪತ್ರ ಬರೆದಿರುವುದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.