ಸೇಡಂ : ಸಚಿವ ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ಕಿತ್ತುಕೊಂಡು ಸಚಿವ ಸುಧಾಕರ್ ಅವರಿಗೆ ನೀಡಿರುವುದು ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿರುವುದಕ್ಕೆ ಕೈಗನ್ನಡಿಯಿದ್ದಂತೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಡಾ.ಶರಣಪ್ರಕಾಶ ಪಾಟೀಲ ಬಿಜೆಪಿಯನ್ನು ಟೀಕಿಸಿದರು.
ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ಹಮ್ಮಿಕೊಂಡ ಆರೋಗ್ಯ ಸಹಾಯ ಹಸ್ತ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾತೆ ಹಂಚಿಕೆಯನ್ನು ಮೊದಲೇ ಮಾಡಬೇಕಿತ್ತು. ಈ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆಡಳಿತ ಪಕ್ಷ ಮಾಡಬೇಕಾದ ಕೆಲಸವನ್ನು ಇಂದು ವಿರೋಧ ಪಕ್ಷವಾದ ಕಾಂಗ್ರೆಸ್ ಮಾಡುತ್ತಿದ್ದು, 6 ಕೋಟಿ ರೂ ವೆಚ್ಚ ಮಾಡಿ ಮನೆ ಮನೆಗೂ ತೆರಳಿ ಜನರ ಆರೋಗ್ಯ ಪರೀಕ್ಷಿಸಲು ಆರೋಗ್ಯ ಸಹಾಯ ಹಸ್ತ ಯೋಜನೆ ರೂಪಿಸಿದೆ' ಎಂದರು.
'ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ವಾರಿಯರ್ಸ್ ಸಹಾಯ ಹಸ್ತ ಕಿಟ್ ಜೊತೆಗೆ ತೆರಳಿ ಜನರ ಆರೋಗ್ಯ ಪರೀಕ್ಷಿಸಲಿದ್ದಾರೆ. ಕೊರೊನಾ ಗುಣಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಅಂತಹ ಜನರನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ನಡೆಯಲಿದೆ. ಕೋವಿಡ್ ವಾರಿಯರ್ಸ್ಗಳ ಆರೋಗ್ಯದ ದೃಷ್ಟಿಯಿಂದ ಅವರಿಗೂ ಸಹ ವಿಮೆ ಸೌಲಭ್ಯ ಕಲ್ಪಿಸಲಾಗಿದೆ' ಎಂದು ತಿಳಿಸಿದರು.