ಕಲಬುರಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಖಂಡಾಳ ಗ್ರಾಮದ ಶರಣಬಸಪ್ಪ ಪಾಟೀಲ (32) ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೆ ಹಿರಿಯ ಅಧಿಕಾರಿಯ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಕಲಬುರಗಿ ಕೋರ್ಟ್ ಬಳಿಯ ಗ್ರೀನ್ ಪಾರ್ಕ್ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಈ ಹಿಂದೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿ ಮೃತ ಅಧಿಕಾರಿಯ ಸಹೋದರ ಪಂಡಿತರಾವ್ ಪಾಟೀಲ್ ಅವರು ಆರ್ಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಥಮ ದರ್ಜೆ ಸಹಾಯಕರಾಗಿದ್ದ ಶರಣಬಸಪ್ಪ ಪಾಟೀಲ ಇತ್ತೀಚೆಗೆ ತಾಲೂಕು ವಿಸ್ತೀರ್ಣಾಧಿಕಾರಿಯಾಗಿ ನೇಮಕಗೊಂಡಿದ್ದರು. ಅಲ್ಲದೇ ಇದೇ ಡಿಸೆಂಬರ್ 2ರಂದು ಅವರ ಮದುವೆ ಕೂಡಾ ನಿಶ್ಚಯವಾಗಿತ್ತು. ಮದುವೆ ಸಿದ್ಧತೆಯಲ್ಲಿ ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ ಶಂಕೆ: 6 ತಿಂಗಳ ಹಿಂದೆ ಮದುವೆಯಾಗಿದ್ದ ಗೃಹಿಣಿ ಆತ್ಮಹತ್ಯೆ
'ಪ್ರಸ್ತುತ ಕಲಬುರಗಿ ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿಯಾದ ಮೆಹಮೂದ್ ಈ ಹಿಂದೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದರು. ಆಗ ತಮ್ಮ ಸಹೋದರನ ಮೇಲೆ ವೈಯಕ್ತಿಕ ಹಗೆತನ ಸಾಧಿಸಿದ್ದಾರೆ. ಹುಡುಗರನ್ನು ಕಳುಹಿಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನಮ್ಮ ಸಹೋದರ ಮನೆಯಲ್ಲಿ ಹೇಳಿಕೊಂಡಿದ್ದರು. ವೈಯಕ್ತಿಕ ದ್ವೇಷ ಸಾಧಿಸಿ ಬಡ್ತಿಯನ್ನು ಸಹ ತಡೆ ಹಿಡಿದು, ಒಂದು ವರ್ಷದ ಸಂಬಳವನ್ನೂ ಬಿಡುಗಡೆ ಮಾಡಿರಲಿಲ್ಲ. ಆಗಾಗ ವಿನಾಕಾರಣ ಕರೆ ಮಾಡಿ ತೊಂದರೆ ಕೊಡುತ್ತಿದ್ದರು. ಹೀಗಾಗಿ, ಮಾನಸಿಕ ವೇದನೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಮೃತರ ಸಹೋದರ ಪಂಡಿತರಾವ್ ಪಾಟೀಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪ್ರಕರಣದ ದಾಖಲಿಕೊಂಡ ಆರ್ಜಿ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.