ಕಲಬುರಗಿ: ಎರಡನೇ ದಿನದ ಸಂಪೂರ್ಣ ಲಾಕ್‌ಡೌನ್ ಯಶಸ್ಸು ಕಂಡಿದೆ. ಇಂದು ಕೂಡಾ ತರಕಾರಿ, ಹಣ್ಣು, ದಿನಸಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಜನ ಸಂಚಾರ ವಿರಳವಾಗಿದೆ.
ಲಾಕ್‌ಡೌನ್ ವೇಳೆ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಹಲವಡೆ ಜನ ಜಂಗುಳಿ ಕಂಡು ಬರುತಿತ್ತು. ವಾಹನಗಳ ಸಂಚಾರ ದಟ್ಟಣೆಯೂ ಇರುತ್ತಿತ್ತು. ನಿನ್ನೆಯಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಿದ್ದು ಜನಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ನಿನ್ನೆಯೂ ಸಂಪೂರ್ಣ ಲಾಕ್‌ಡೌನ್ ಯಶಸ್ವಿಯಾಗಿತ್ತು.
ಅಗತ್ಯ ಸೇವೆಗಾಗಿ ಬೆರಳೆಣಿಕೆಯಷ್ಟು ಜನ ಮಾತ್ರ ರಸ್ತೆಯಲ್ಲಿ ಸಂಚಾರ ಮಾಡುವ ದೃಶ್ಯ ಕಂಡು ಬರುತ್ತಿದೆ. ಬೆಳಗೆ ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಪ್ರಮುಖ ರಸ್ತೆ ಮಾತ್ರವಲ್ಲದೇ ಬಡಾವಣೆಗಳಲ್ಲಿಯೂ ಸಂಚಾರ ಮಾಡಿ ತೆರೆದ ಅಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದರು.
ಇದನ್ನೂ ಓದಿ: ಸಂಪೂರ್ಣ ಲಾಕ್‌ಡೌನ್ ನಡುವೆಯೂ ರಾಯಚೂರಿನಲ್ಲಿ ತರಕಾರಿ ಮಾರಾಟ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಈ ಮೊದಲು ಪ್ರತಿನಿತ್ಯ 1,500-1,800 ಜನರಿಗೆ ಸೋಂಕು ತಗುಲಿರುವುದು ದೃಢಪಡುತಿತ್ತು. ಇದೀಗ ಲಾಕ್‌ಡೌನ್ ಹಾಗೂ ಹಲವು ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ನಿತ್ಯ 300-400 ಜನರಿಗೆ ಮಾತ್ರ ಸೋಂಕು ಹರಡುತ್ತಿದೆ. ಆದರೆ ಮೃತರ ಸಂಖ್ಯೆ ಮಾತ್ರ ಹಾಗೆಯೇ ಮುಂದುವರೆದಿದ್ದು, ನಿತ್ಯ 10 ರಿಂದ 20 ಜನರು ಸಾವನ್ನಪ್ಪುತ್ತಿದ್ದಾರೆ.
ಸದ್ಯ ಕೋವಿಡ್ ಹತೋಟಿಗೆ ಬರುತ್ತಿದ್ದು, ಕೆಲ ದಿನದವರೆಗೆ ಸಂಪೂರ್ಣ ಲಾಕ್‌ಡೌನ್ ಮುಂದುವರೆದರೆ ಸೋಂಕನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ.