ಕಲಬುರಗಿ: ಹಗಲು ಹೊತ್ತಿನಲ್ಲಿ ಕೂಲಿಂಗ್ ಗ್ಲಾಸ್ ಮಾರಟ ಮಾಡುತ್ತಾ, ರಾತ್ರಿಯಾಗುತ್ತಿದ್ದಂತೆ ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ಅನ್ನು ಬಂಧಿಸುವಲ್ಲಿ ವಿವಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮನಾಥ ಸಕಟ (25), ಚರಣ ಸಕಟ(23), ದೇವರಾಜ್ ಕಾಂಬಳೆ (25) ಮತ್ತು ಶಶಿನಾಥ್ ಪಾಟೀಲ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ನಗರದ ಬಾಪು ನಗರ ಕಾಲೋನಿ ನಿವಾಸಿಗಳಾಗಿದ್ದಾರೆ. ಬಂಧಿತರಿಂದ 3.45 ಲಕ್ಷ ರೂ. ಮೌಲ್ಯದ 97 ಗ್ರಾಂ ಚಿನ್ನಾಭರಣ, ಚಾಕು, ಒಂದು ಬೈಕ್ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಹಗಲಿನಲ್ಲಿ ವಾಹನ ಸವಾರರಿಗೆ ಕೂಲಿಂಗ್ ಗ್ಲಾಸ್ ಮಾರಾಟ ಮಾಡುವುದು ಹಾಗೂ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ಖದೀಮರು, ಸಂಜೆಯಾಗುತ್ತಿದ್ದಂತೆ ನಗರದ ಹೊರವಲಯದ ರಸ್ತೆಗಳಲ್ಲಿ ನಿಂತು ವಾಹನಗಳನ್ನು ಅಡ್ಡಗಟ್ಟಿ ಚಾಕುವಿನಿಂದ ಹೆದರಿಸಿ ಹಣ, ಚಿನ್ನಾಭರಣ ಸುಲಿಗೆ ಮಾಡುತ್ತಿದ್ದರು.
ಐದು ಪ್ರಕರಣಗಳಲ್ಲಿ ಆರೋಪಿಗಳು ಪೊಲೀಸರಿಗೆ ಬೇಕಾಗಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.