ಕಲಬುರಗಿ: ಉಗ್ರರೊಂದಿಗೆ ಹೋರಾಡಿ ಹುತಾತ್ಮನಾದ ಯೋಧ ರಾಜಕುಮಾರ್ ಮಾವಿನ್ ಅವರ ಅಂತ್ಯಕ್ರಿಯೆ ಸ್ವಗ್ರಾಮ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಹುತಾತ್ಮ ಯೋಧನಿಗೆ ಗೌರವ ನಮನ:
ಭಾರತ ಬಾಂಗ್ಲಾ ಗಡಿಯಲ್ಲಿ ಉಗ್ರರೊಂದಿಗೆ ಹೋರಾಟ ಮಾಡಿ ವೀರಮರಣವನ್ನಪ್ಪಿದ ಯೋಧ ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಇಡೀ ಚಿಂಚನಸೂರ ಗ್ರಾಮವಲ್ಲದೆ ಜಿಲ್ಲೆಯ ಜನರು ಕಂಬನಿ ಮಿಡಿದರು. ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಸಾವಿರಾರು ಜನ ಪುಷ್ಪಗುಚ್ಛವಿರಿಸಿ ಭಾರತ್ ಮಾತಾಕೀ ಜೈ. ವೀರಯೋಧ್ ಅಮರ್ ರಹೇ ಎಂಬ ಜಯಘೋಷ ಕೂಗಿ ಹುತಾತ್ಮರಾದ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ, ಎಸ್ಪಿ ಡಾ ಸಿಮಿ ಮರಿಯಮ್ ಜಾರ್ಜ್, ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್, ಆಳಂದ ಶಾಸಕ ಸುಭಾಷ್ ಗುತ್ತೇದಾರ್, ಮಾಜಿ ಸಚಿವ ರೇವುನಾಯಕ್ ಬೆಳಮಗಿ ಸೇರಿದಂತೆ ಸಾವಿರಾರು ಜನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಜಿಲ್ಲಾದ್ಯಂತ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಬಿಎಸ್‌ಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಯೋಧನಿಗೆ ಗೌರವ ಸಲ್ಲಿಸಿದರು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಜಮೀನಿನಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಗ್ರಾಮದಲ್ಲಿ ನಿರ್ಮಾಣವಾಗಲಿದೆ ಯೋಧನ ಪುತ್ಥಳಿ:
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಮ್ಮೂರಿನ ಯೋಧ ರಾಜಕುಮಾರ್ ಅವರ ಪುತ್ಥಳಿ ಗ್ರಾಮದಲ್ಲಿ ಸ್ಥಾಪನೆ ಮಾಡಬೇಕು ಅಂತಾ ಗ್ರಾಮಸ್ಥರು ಮಾಡಿದ ಮನವಿಗೆ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ತಮ್ಮದೇ ಸ್ವಂತ ಖರ್ಚಿನಲ್ಲಿ ಯೋಧನ ಪುತ್ಥಳಿ ಸ್ಥಾಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನ ದೊರಕಿಸಿಕೊಡುವುದಾಗಿ ಹೇಳಿದರು.
ಆಗಸ್ಟ್ 3ರಂದು ಏನಾಗಿತ್ತು?
ಆಗಸ್ಟ್ 3 ರಂದು ತ್ರಿಪುರದ ಧಾಲಾಯಿ ಪ್ರದೇಶದ ಭಾರತ - ಬಾಂಗ್ಲಾ ಗಡಿಯಲ್ಲಿ ಉಗ್ರರ ಸುಳಿವು ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವಾಗ, ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ, ಎದೆಗೆ ಗುಂಡು ತಗುಲಿದ್ದರಿಂದ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಯೋಧ ರಾಜಕುಮಾರ್ ಅವರನ್ನು ತಕ್ಷಣವೇ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ವೀರಣ ಮರಣವನ್ನಪ್ಪಿದ್ದರು. ನಿನ್ನೆ ರಾತ್ರಿ 8.30ಕ್ಕೆ ಹೈದರಾಬಾದ್‌ನ ಏರ್ಪೋರ್ಟ್ಗೆ ಆಗಮಿಸಿದ ಯೋಧನ ಪಾರ್ಥಿವ ಶರೀರರವನ್ನು ತಡರಾತ್ರಿ ಸ್ವಗ್ರಾಮ ಚಿಂಚನಸೂರ ಗ್ರಾಮಕ್ಕೆ ಸೇನಾ ವಾಹನದಲ್ಲಿ ತರಲಾಗಿತ್ತು.
ಕಳೆದ ಏಪ್ರಿಲ್ ತಿಂಗಳಲ್ಲಿ ಗ್ರಾಮಕ್ಕೆ ಬಂದು ಹೋಗಿದ್ದ ರಾಜಕುಮಾರ್, ಇದೇ ವರ್ಷ ಡಿಸೆಂಬರ್‌ನಲ್ಲಿ ಸೇನೆಯಿಂದ ನಿವೃತ್ತರಾಗುವವರಿದ್ದರು. ಪುತ್ರನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಹುತಾತ್ಮ ಯೋಧ ರಾಜಕುಮಾರ್ ಅವರಿಗೆ ಮೂವರು ಮಕ್ಕಳಿದ್ದು, ಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುವಂತಿತ್ತು.