ಕಲಬುರಗಿ: 15ನೇ ಹಣಕಾಸು ಆಯೋಗದ ಶಿಫಾರಸಿನನ್ವಯ ಕರ್ನಾಟಕಕ್ಕೆ ಅನುದಾನ ಕಡಿತವಾಗುತ್ತಿರುವುದರ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಈಗಾಗಲೇ ರಾಜ್ಯಕ್ಕೆ ಅನ್ಯಾಯವಾಗ್ತಿದೆ. ನಮಗೆ ಸಿಗಬೇಕಾದ ಹಣ ಸಿಗ್ತಿಲ್ಲ. ನಮ್ಮ ಯೋಜನೆಗಳಿಗೂ ಹಣ ಬಿಡುಗಡೆ ಮಾಡ್ತಿಲ್ಲ. ರೈಲ್ವೆ ಯೋಜನೆ ಸೇರಿದಂತೆ ಯಾವ ಯೋಜನೆಗೂ ಹಣ ಬಿಡುಗಡೆಯಾಗ್ತಿಲ್ಲ. ಕೋಲಾರ ರೈಲು ಬೋಗಿ ಫ್ಯಾಕ್ಟರಿ ಮಂಜೂರು ಮಾಡಿಸಿದ್ದೆ, ಆದ್ರೆ ಅದನ್ನೂ ಮುಚ್ಚಿಸಿದ್ದಾರೆ. ಯಾದಗಿರಿ ಜಿಲ್ಲೆ ಸೈದಾಪುರ ಕೋಚ್ ಫ್ಯಾಕ್ಟರಿ ವಿಸ್ತರಣೆಯನ್ನೂ ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. 371(ಜೆ) ಅಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಅನುದಾನ ಕೊಡಬೇಕಿತ್ತು, ಅದನ್ನೂ ಕೊಟ್ಟಿಲ್ಲ. ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಯತ್ನಿಸಬೇಕು. ಅದನ್ನು ಬಿಟ್ಟು ಬರೀ ಟ್ರಂಪ್ ಜಪ ಮಾಡ್ತಾ ಕುಳಿತರೆ ಯಾವುದೇ ಪ್ರಯೋಜನವಿಲ್ಲ ಎಂದು ಖರ್ಗೆ ಪ್ರಧಾನಿ ವಿರುದ್ಧವೂ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಪ್ರಧಾನಿಯನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ರಾಜ್ಯಕ್ಕೆ ಆಗುತ್ತಿರೋ ತೊಂದರೆ ನಿವಾರಿಸಿಕೊಳ್ಳಲು ಯತ್ನಿಸಬೇಕು. ಕೇವಲ ಮಾತಿನ ಉತ್ತರ ಪಡೆಯುವುದರಿಂದ ಪ್ರಯೋಜನವಿಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟರು.