ಕಲಬುರಗಿ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ನಕಲಿ ನೇಮಕಾತಿ ಪತ್ರ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿ ನಿವಾಸಿ ಮಲ್ಲಿನಾಥ ಎಂಬ ಯುವಕನಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಕರು ಮೂರು ಲಕ್ಷ ರೂಪಾಯಿ ಹಣ ಬೇಡಿಕೆ ಇಟ್ಟಿದ್ರಂತೆ, ಒಂದು ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರಂತೆ, ಬಳಿಕ ನಕಲಿ ನೇಮಕಾತಿ ಪತ್ರ ನೀಡಿದ್ದಾರೆ.
ಮಲ್ಲಿನಾಥ ಕಲಬುರಗಿ ರೈಲ್ವೆ ಅಧಿಕಾರಿಗಳ ಬಳಿ ನೇಮಕಾತಿ ಪತ್ರ ಹಿಡಿದು ಹೋದಾಗ ಇದೊಂದು ನಕಲಿ ನೇಮಕಾತಿ ಪತ್ರ ಎಂಬುದು ಬೆಳಕಿಗೆ ಬಂದಿದೆ. ರೈಲ್ವೆ ಇಲಾಖೆ ಅಧಿಕಾರಿಗಳ ಬಳಿ ಮಲ್ಲಿನಾಥ ಹೋಗಿರುವ ವಿಷಯ ಅರಿತ ವಂಚಕರು ತಾವು ಪಡೆದ ಹಣ ಮರಳಿಸಿದ್ದಾರೆಂದು ತಿಳಿದುಬಂದಿದೆ. ಹೀಗೆ ಹಲವರನ್ನು ವಂಚಿಸಿ ವಂಚಕರು ಹಣ ಪಡೆದಿರುವ ಅನುಮಾನವಿದೆ. ಆದ್ರೆ ಪ್ರಕರಣದ ಬಗ್ಗೆ ಪೊಲೀಸರಿಗೆ ಗಮನಕ್ಕೆ ಬಂದಿದ್ದರೂ ದೂರು ದಾಖಲಿಸಿಕೊಳ್ಳದೆ ಅವರನ್ನು ಬಿಟ್ಟು ಕಳಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರೈಲ್ವೆ ಪೊಲೀಸರನ್ನು ಈ ಬಗ್ಗೆ ವಿಚಾರಿಸಿದರೆ ಸ್ಥಳಿಯ ಪೊಲೀಸರ ವ್ಯಾಪ್ತಿಗೆ ಬರುವುದರಿಂದ ಯಾವುದೆ ಕ್ರಮ ಕೈಗೊಂಡಿಲ್ಲ, ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವಂಚಕರ ಜಾಡು ಬೇದಿಸಿದರೆ ದೊಡ್ಡ ದೊಡ್ಡ ಕುಳಗಳು ಬಯಲಿಗೆ ಬರಬಹುದು. ಇನ್ನು ಈ ಬಗ್ಗೆ ಸಂಸದ ಉಮೇಶ ಜಾಧವ ಗಮನಕ್ಕೆ ತಂದಾಗ ,ಮೋಸ ಮಾಡಿದವರು ಯಾರೇಇರಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿ, ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.