ಕಲಬುರಗಿ: ಕೊರೊನಾ ಸೋಂಕು ತಗುಲದಿರಲಿ ಎಂಬ ಕಾರಣಕ್ಕೆ ಸಾಕಷ್ಟು ಸುರಕ್ಷತಾ ಕ್ರಮದೊಂದಿಗೆ ನಡೆಸಲಾಗುತ್ತಿದ್ದ ವಠಾರ ಶಾಲೆಗೂ ಈಗ ಕೊರೊನಾ ಸೋಂಕು ವಕ್ಕರಿಸಿದ್ದು, ಭಾರೀ ಆತಂಕ ಸೃಷ್ಟಿಸಿದೆ.
ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ವಠಾರ ಶಾಲೆಯಲ್ಲಿ ಅಭ್ಯಾಸ ಮಾಡ್ತಿದ್ದ ನಾಲ್ವರು ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಮುಂಚೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತಪಾಸಣೆ ನಡೆಸಿದಾಗ ನಾಲ್ವರು ಮಕ್ಕಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಒಟ್ಟು 20 ಶಿಕ್ಷಕರಿಗೆ ಮತ್ತು 207 ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಶಿಕ್ಷಕರೆಲ್ಲರಿಗೂ ನೆಗೆಟಿವ್ ಬಂದಿದ್ದು, ನಾಲ್ವರು ವಿದ್ಯಾರ್ಥಿಗಳಿಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 24 ವಿದ್ಯಾರ್ಥಿಗಳ ವರದಿ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ವಠಾರ ಶಾಲೆ ಬಂದ್ ಮಾಡಲು ಸೂಚಿಸಲಾಗಿದೆ. ಇಂದು ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯುವುದಾಗಿ ಈಟಿವಿ ಭಾರತಕ್ಕೆ ಬಿಇಒ ಚಿತ್ರಶೇಖರ ದೇಗಲಮಡಿ ತಿಳಿಸಿದ್ದಾರೆ.
ಮಾಶಾಳ ಗ್ರಾಮದಲ್ಲಿ ಒಟ್ಟು 19 ಕಡೆಗಳಲ್ಲಿ ವಠಾರ ಶಾಲೆ ಆರಂಭಿಸಲಾಗಿತ್ತು. ಆಯಾ ಬಡಾವಣೆಯ ಮಕ್ಕಳಿಗೆ ತೆರೆದ ಪ್ರದೇಶದಲ್ಲಿ ಶುದ್ಧವಾದ ವಾತಾವರಣದಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ ಸಾಕಷ್ಟು ಸುರಕ್ಷತಾ ಕ್ರಮದೊಂದಿಗೆ ವಿದ್ಯಾ ಬೋಧನೆ ಮಾಡಿದ್ದರು. ಆದರೂ ಮಕ್ಕಳಲ್ಲಿ ಸೋಂಕು ಕಂಡುಬಂದಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಒಂದು ಕಡೆ ಸರ್ಕಾರ ಶಾಲೆ ಪುನರಾರಂಭಿಸಲು ತಯಾರಿ ನಡೆಸಿರುವಾಗಲೇ ವಠಾರ ಶಾಲೆಯ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿದ್ದು ಪೋಷಕರ ಆತಂಕ ಹೆಚ್ಚಿಸಿದೆ.