ಕಲಬುರಗಿ: ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಅಫಜಲಪುರ ತಾಲೂಕಾಸ್ಪತ್ರೆ ಮೇಲೆ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಡಯಾಲಿಸ್ ಯಂತ್ರಗಳು ಕಾರ್ಯ ಸ್ಥಗಿತಗೊಂಡ ಹಿನ್ನೆಲೆ ನಾಲ್ವರು ರೋಗಿಗಳು ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆಸ್ಪತ್ರೆ ಬೇಜವಾಬ್ದಾರಿಗೆ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಮಾನವನ ದೇಹಕ್ಕೆ ಕಿಡ್ನಿ ಅತ್ಯಗತ್ಯ ಅಂಗ, ಕಿಡ್ನಿ ದೀರ್ಘಕಾಲದವರೆಗೆ ಕಾರ್ಯ ನಿರ್ವಹಿಸದಿದ್ರೆ ಶರೀರದಲ್ಲಿರುವ ನಿರುಪಯುಕ್ತ ಪದಾರ್ಥಗಳು ಮತ್ತು ಬೇಡವಾದ ನೀರಿನ ಅಂಶ ಬೆಳೆದು ಸಾವು ಬರಬಹುದು. ಕಿಡ್ನಿ ಸಮಸ್ಯೆ ಇರುವ ರೋಗಿಗಳು ಬದುಕಬೇಕಾದ್ರೆ ಡಯಾಲಿಸಿಸ್ ಯಂತ್ರದ ಮೂಲಕ ನಿರಂತರ ರಕ್ತ ಶುದ್ಧೀಕರಣ ಮಾಡಿಸಿಕೊಳ್ಳಬೇಕು. ರಕ್ತ ಶುದ್ಧೀಕರಣ ಮಾಡದಿದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ. ಆದ್ರೆ, ಅಫಜಲಪೂರ ತಾಲೂಕಾಸ್ಪತ್ರೆಯಲ್ಲಿ ಇರುವ ಎರಡು ಡಯಾಲಿಸಿಸ್ ಯಂತ್ರಗಳು ಕೆಟ್ಟು ನಿಂತಿವೆ. ತಾಲೂಕಿನ 16 ರೋಗಿಗಳು ಇದೇ ಆಸ್ಪತ್ರೆಯ ಡಯಾಲಿಸಿಸ್ ಯಂತ್ರದ ಮೇಲೆ ಅವಲಂಬಿತರಾಗಿದ್ದರು. ಆದ್ರೆ ಯಂತ್ರ ಕೆಟ್ಟಿದ್ದರಿಂದ ಪ್ರತಿಬಾರಿ ಸಾವಿರಾರು ರೂಪಾಯಿ ಖರ್ಚು ಮಾಡಿ ವಾರಕ್ಕೆ ಮೂರುಬಾರಿ ರಕ್ತ ಶುದ್ಧೀಕರಣ ಮಾಡಿಸಿಕೊಳ್ಳಲು ಆಗದ ಬಡ ರೋಗಿಗಳು ನರಳಿ ಪ್ರಾಣ ಬಿಡುತ್ತಿದ್ದಾರೆ. ಕಳೆದ ಮೂರು ದಿನದಲ್ಲಿ ನಾಲ್ವರು ರೋಗಿಗಳು ಉಸಿರು ಚೆಲ್ಲಿದ್ದಾರೆ. ಆಸ್ಪತ್ರೆಯ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಇದೇ ಆಸ್ಪತ್ರೆಯಲ್ಲಿ ಆರು ಜನ ರೋಗಿಗಳು ಸಾವನ್ನಪ್ಪಿ, ಇಡೀ ರಾಜ್ಯದಲ್ಲಿ ವ್ಯಾಪಕ ಚರ್ಚೆ ಕೂಡಾ ಆಗಿತ್ತು. ಈಗ ಆಸ್ಪತ್ರೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: 'ಅವನಿ' ಚಂಡಮಾರುತದ ಎಫೆಕ್ಟ್.. ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ
ಡಯಾಲಿಸಿಸ್ ಯಂತ್ರದ ಅಗತ್ಯದ ಬಗ್ಗೆ ಗೊತ್ತಿದ್ದರೂ ಎರಡು ತಿಂಗಳಿನಿಂದ ಕೆಟ್ಟುನಿಂತ ಯಂತ್ರಗಳ ದುರಸ್ಥೆಯ ಗೋಜಿಗೆ ಆಡಳಿತ ಮಂಡಳಿ ಹೋಗಿಲ್ಲ, ಇದರಿಂದ ರೋಗಿಗಳು ಅಕ್ಷರಶಃ ನರಕಯಾತನೆಯಲ್ಲಿದ್ದಾರೆ. ಸುದ್ದಿ ತಿಳಿದು ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ್ ಆಸ್ಪತ್ರೆಗೆ ಹಠಾತ್ತನೇ ಭೇಟಿ ನೀಡಿದ್ದಾರೆ. ಡಯಾಲಿಸಿಸ್ ಯಂತ್ರಗಳನ್ನು ನೋಡಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ಜಿಲ್ಲಾ ವೈದ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಅವರನ್ನು ದೂರವಾಣಿ ಮೂಲಕ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಸ್ಪತ್ರೆಗೆ ವೈದ್ಯರು ಗೈರಾಗಿದ್ದು, ಹಾಜರಿದ್ದ ಸಿಬ್ಬಂದಿ ಹರಟೆ ಹೊಡೆಯುತ್ತ ಕುಳಿತಿದ್ದು, ಆಸ್ಪತ್ರೆಯಲ್ಲಿ ಶುಚಿತ್ವ ಇಲ್ಲದಿರುವುದನ್ನು ಕಂಡು ಶಾಸಕರ ಕೋಪ ನೆತ್ತಿಗೇರಿತ್ತು. ಕೂಡಲೇ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಆಸ್ಪತ್ರೆ ವೈದ್ಯರು ಹೇಳೋದು ಏನು?: ಆಸ್ಪತ್ರೆಯಲ್ಲಿ 2 ಡಯಾಲಿಸಿಸ್ ಯಂತ್ರಗಳಿವೆ. ಇದರಲ್ಲಿ ಒಂದು ಮಷಿನ್ ಚಾಲ್ತಿಯಲ್ಲಿದ್ದು 10 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಯಾಲಿಸಿಸ್ ಮಷಿನ್‌ಗಳು ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿವೆ. ಈ ಬಗ್ಗೆ ಸರ್ಕಾರ ನಿಯೋಜಿಸಿರುವ ಕಲ್ಕತ್ತಾದ ಇಸ್ಕಾ ಸಂಜೀವಿನ ಕಂಪನಿಯನ್ನು ಕೇಳಿದ್ರೆ ವಿದ್ಯುತ್ ಏರುಪೇರಿನಿಂದ ಸಮಸ್ಯೆ ಆಗುತ್ತಿದೆ ಎನ್ನುತ್ತಿದ್ದಾರೆ.
ವಿದ್ಯುತ್ ಸರಬರಾಜು ಸಹಾಯಕ ಅಭಿಯಂತರನ್ನು ಕೇಳಿದ್ರೆ ವಿದ್ಯುತ್ ವೋಲ್ಟೇಜ್ ಕಡಿಮೆ ಮಾಡಿದರೆ ತಾಲೂಕಿನ ಹಳ್ಳಿಗಳಿಗೆ ವಿದ್ಯುತ್ ಪೂರೈಸಲು ತೊಂದರೆ ಇದೆ ಎನ್ನುತ್ತಿದ್ದಾರೆ. ಜನರೇಟರ್ನಿಂದ ಯಂತ್ರ ಕಾರ್ಯನಿರ್ವಹಿಸಬೇಕು ಅಂದ್ರೆ ಇಂಧನ ಹಾಕಲು ಅನುದಾನ ಕೊರತೆ ಇದೆ ಅಂತ ಆಸ್ಪತ್ರೆ ವೈದ್ಯಾಧಿಕಾರಿ ನುಣುಚಿಕೊಳ್ಳುತ್ತಿದ್ದಾರೆ.