ಕಲಬುರಗಿ: ಬಿಜೆಪಿ ನಾಯಕ ದತ್ತಾತ್ರೇಯ ಪಾಟೀಲ್ ರೇವೂರ ಆಮಿಷದ ನಡುವೆಯೂ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ರೇವೂರ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಕಲಬುರಗಿಯ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿಯಾಗಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಮತ್ತು ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ, ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಗ್ರಾ.ಪಂ. ಚುನಾವಣೆ ಸಂದರ್ಭದಲ್ಲಿ ಅವಿರೋಧ ಆಯ್ಕೆಯಾಗುವ ಗ್ರಾ.ಪಂ.ಗಳಿಗೆ 1 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿಕೆ ನೀಡಿದ್ದರು. ಆದರೂ ಜನರು ಆಮಿಷದ ಪ್ರಭಾವಕ್ಕೆ ಒಳಗಾಗದೇ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ನೈತಿಕ ಹೊಣೆ ಹೊತ್ತು ಕೂಡಲೇ ಕೆ.ಕೆ.ಆರ್.ಡಿ.ಬಿ. ಸ್ಥಾನಕ್ಕೆ ರೇವೂರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಮುಖಂಡರು, ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ವಂಚನೆ ಮಾಡುತ್ತಿದೆ. ಇಲ್ಲಿ ಇರುವ ಪ್ರಮುಖ ಕಚೇರಿಗಳನ್ನು ಬೇರಡೆ ಸ್ಥಳಾಂತರಿಸುವ ಪಿತೂರಿ ನಡೆಸಿದೆ. ಈಗಾಗಲೇ ನವೀಕರಿಸಬಹುದಾದ ಇಂದನ ಪ್ರಾದೇಶಿಕ ಕಚೇರಿ ಹಾಗೂ ವಿಭಾಗೀಯ ಆಹಾರ ಪ್ರಯೋಗಾಲಯಗಳನ್ನು ಸ್ಥಳಾಂತರಿಸಿದ್ದು, ತಕ್ಷಣ ರದ್ದುಪಡಿಸಿ ಇಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿದರು.