ಕಲಬುರಗಿ: ಬೆಂಗಳೂರಿನಲ್ಲಿ ಕುಳಿತ ಶಾಸಕ ಪ್ರಿಯಾಂಕ್ ಖರ್ಗೆ ಉಡಾಫೆ ಮಾತನಾಡುತ್ತಿದ್ದಾರೆ. ಕೊರೊನಾ ಸೇರಿದಂತೆ ಚಿತ್ತಾಪುರ ಕ್ಷೇತ್ರದಲ್ಲಿ ಹಲವು ಗಂಭೀರ ಸಮಸ್ಯೆಗಳಿದ್ದರೂ ಇತ್ತ ತಲೆ ಹಾಕಿಲ್ಲ ಎಂದು ಮಾಜಿ ಶಾಸಕ ವಾಲ್ಮಿಕಿ ನಾಯಕ ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಗೋಂವಿದ ಕಾರಜೋಳ ವಿರುದ್ಧ ಟೀಕೆ ಮಾಡಿದ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೆಟು ನೀಡಿದ ಅವರು, ಕಾರಜೋಳ ಅವರು ಈಗಾಗಲೇ ಕಲಬುರಗಿಗೆ ಹಲವು ಬಾರಿ ಭೇಟಿ ನೀಡಿ ಕೊರೊನಾ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದರು.
ಖರ್ಗೆ ಅವರ ಕ್ಷೇತ್ರ ಚಿತ್ತಾಪುರದ ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆದರೂ ಇತ್ತ ಕಡೆ ತೆಲೆ ಹಾಕಿಲ್ಲ. ಜಿಲ್ಲಾಡಳಿತ ಪಟ್ಟಣದ ನಾಲ್ಕು ಏರಿಯಾಗಳನ್ನು ಸೀಲ್ ಡೌನ್ ಮಾಡಿದೆ. ಆರ್ಥಿಕ ಸಮಸ್ಯೆ ಎದುರಾಗಿದ್ದರೂ ಶಾಸಕ ಖರ್ಗೆ ಬಂದಿಲ್ಲ ಎಂದು ಕಿಡಿಕಾರಿದರು.
ಭೀಮಾ ನದಿ ಬತ್ತಿ ಹೋಗಿದ್ದು, ಚಿತ್ತಾಪುರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಂತಹ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.