ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ರಚನೆಗೆ ಈಗಾಗಲೇ ತೀರ್ಮಾನವಾಗಿದೆ. ಇನ್ನೇನು ಅಧಿಕೃತ ಘೋಷಣೆಯಾಗಬೇಕಷ್ಟೇ ಎಂದು ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜನತಾದಳ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಬಗ್ಗೆ ಈಗಾಗಲೇ ತೀರ್ಮಾನ ಮಾಡಲಾಗಿದೆ. ಇನ್ನೇನು ಅಧಿಕೃತ ಘೋಷಣೆ ಅಷ್ಟೇ ಬಾಕಿ ಎಂಬುದು ನನ್ನ ಭಾವನೆ. ಮಲ್ಲಿಕಾರ್ಜುನ ಖರ್ಗೆಯವರು ದೇವೇಗೌಡರೊಂದಿಗೆ ಮಾತನಾಡಿದ ಬಳಿಕ ನಮ್ಮ ರಾಜ್ಯ ನಾಯಕರು ಕುಮಾರಸ್ವಾಮಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರಿಂದಲೂ ಕೂಡ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದೆ. ಸ್ಥಳೀಯ ಜೆಡಿಎಸ್ ನಾಯಕರು ಕೂಡ ಕಾಂಗ್ರೆಸ್ಸಿನತ್ತ ಹೆಚ್ಚಿನ ಒಲವು ಹೊಂದಿದ್ದಾರೆ ಎಂದರು.
ಕಾಂಗ್ರೆಸ್ ಯಾವತ್ತೂ ಜೆಡಿಎಸ್ ಪಕ್ಷವನ್ನು ಮುಳುಗಿಸುವ ಪ್ರಯತ್ನ ಮಾಡಿಲ್ಲ. ಕುಮಾರಸ್ವಾಮಿಯವರನ್ನು ಸಮ್ಮಿಶ್ರ ಸರ್ಕಾರದಲ್ಲಿ ನಾವು ಮುಖ್ಯಮಂತ್ರಿ ಮಾಡಿದ್ದೇವೆ. ಸೆಕ್ಯುಲರ್ ಪಾರ್ಟಿಗಳು ಒಂದಾಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಸೈದಾಂತಿಕ ನಿಲುವು. ಇದೀಗ ಮತ್ತೆ ಕುಮಾರಸ್ವಾಮಿ ಬಳಿ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳೋಣ ಎಂದು ಅಂಗಲಾಚಿದ್ದಾರೆ. ಬಿಜೆಪಿಯವರಿಗೆ ನೈತಿಕತೆ, ಮಾನ-ಮರ್ಯಾದೆ ಒಂಚೂರು ಇಲ್ಲ ಎಂದು ಹರಿಹಾಯ್ದರು.
ಜೆಡಿಎಸ್ನವರು ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ವಿಚಾರದ ಕುರಿತು ಮಾತನಾಡುತ್ತಾ, ಕಾಂಗ್ರೆಸ್ ಮತ್ತು ಜೆಡಿಎಸ್ ನ್ಯಾಚುರಲ್ ಮೈತ್ರಿ ಇದೆ. ಕಲಬುರಗಿ ಮಹಾನಗರ ಪಾಲಿಕೆ ಸರ್ಕಾರ ರಚನೆ ತೀರ್ಮಾನದ ನಂತರ ಮೇಯರ್ ಪಟ್ಟ ಯಾರಿಗೆ ನೀಡಬೇಕು ಎಂಬುವುದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣ: ಸಿಬಿಐ ತನಿಖೆಗೆ ಸರ್ಕಾರ ನಕಾರ