ಕಲಬುರಗಿ: ಮೇ ತಿಂಗಳಲ್ಲೇ ಹವಾಮಾನ ಇಲಾಖೆ ಮಳೆ ಕೊರತೆ ಬಗ್ಗೆ ವರದಿ ಕೊಟ್ಟಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಗಮನ ಹರಿಸಲಿಲ್ಲ. ಹವಾಮಾನ ಇಲಾಖೆ ವರದಿ ಕೊಟ್ಟ ತಕ್ಷಣವೇ ಕಾವೇರಿ ನೀರು ನಿರ್ವಹಣಾ ಮಂಡಳಿ ಬಳಿ ಸರ್ಕಾರ ಹೋಗಿದ್ರೆ ಇಷ್ಟೊಂದು ಸಮಸ್ಯೆ ತಲೆದೋರುತ್ತಿರಲಿಲ್ಲ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ, ಶಾಸಕ ಜಿ ಟಿ ದೇವೇಗೌಡ ಹೇಳಿದ್ದಾರೆ.
ಕಾವೇರಿ ನೀರಿನ ವಿಚಾರದಲ್ಲಿ ಮಾಧ್ಯಮಗಳಿಗೆ ಇರುವ ಕಾಳಜಿ ಸರ್ಕಾರಕ್ಕೆ ಇಲ್ಲದಂತಾಗಿದೆ. ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ವಿಫಲ ಆಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ವಾಸ್ತವಾಂಶ ತಿಳಿಸಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ತಮಿಳುನಾಡು ಸಿಎಂ ಸ್ಟಾಲಿನ್ ಜೊತೆ ಸೇರಿಕೊಂಡು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ತಮಿಳುನಾಡು ಹೇಳಿದ ಹಾಗೆ ಕಾವೇರಿ ನೀರು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ರಾಜಕೀಯಗೋಸ್ಕರ ರಾಜ್ಯದ ಹಿತ ಬಲಿಕೊಡ್ತಿದ್ದಾರೆ. INDIA ಅಧಿಕಾರಕ್ಕೆ ತರಲು ರಾಜ್ಯದ ಜನರನ್ನ ಬಲಿ ಕೊಡ್ತಿದ್ದಾರೆ. ರಾಜ್ಯದ ಹಿತವನ್ನು ಬಲಿ ಕೊಟ್ಟು ಲೋಕಸಭೆ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ವೈರಿಗಳ ಥರ ಇರಬೇಕು ಅನ್ನೋ ವಿಚಾರ ಕಾಂಗ್ರೆಸ್ಗೆ ಇದೆ. ಆದ್ರೆ ಕಾಂಗ್ರೆಸ್ ಸಚಿವರೇ ಮೂರು ಡಿಸಿಎಂ, ಐದು ಡಿಸಿಎಂ ಅಂತ ಕಿತ್ತಾಡ್ಕೋತ್ತಿದ್ದಾರೆ. ಮೂರು ಡಿಸಿಎಂ, ಐದು ಡಿಸಿಎಂ ಬೇಕು ಅನ್ನೋ ಈ ರೀತಿ ಸರ್ಕಾರ ಯಾವತ್ತಾದ್ರು ನೋಡಿದ್ದಿರಾ? ಈ ಮುಂಚೆ ಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿದ್ರು. ಈಗ ಅದೇ ಸಿದ್ದರಾಮಯ್ಯ ವಿಫಲವಾದ ಮುಖ್ಯಮಂತ್ರಿ ಆಗೋಗಿ ಬಿಟ್ಟಿರಲ್ಲ ಎಂದು ಕಿಚಾಯಿಸಿದರು.
ಇವತ್ತು ಮೋದಿ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ. 1983ರಲ್ಲಿ ಗೋಲಿಬಾರ್ ಆಯ್ತು. ಗೋಲಿಬಾರ್ ಆದ ಸಂದರ್ಭದಲ್ಲಿ ಸರ್ಕಾರವೇ ಹೊಯ್ತು. ಕಾವೇರಿ ನೀರಿನ ವಿಚಾರವನ್ನು ರಾಜ್ಯ ಸರ್ಕಾರ ಪ್ರಧಾನಿಯವರ ಗಮನಕ್ಕೆ ತರುವ ಕೆಲಸ ಮಾಡಲಿಲ್ಲ. ಹೋರಾಟಗಾರರಿಂದ ಆದ್ರು ಮಾಹಿತಿ ಹೋಗಲಿ ಬಿಡಿ, ಹೋರಾಟಕ್ಕೆ, ರೈತ ಸಂಘಟನೆಗಳು, ಚಲನಚಿತ್ರ ನಟರು, ವರ್ತಕರು ಎಲ್ಲರೂ ಬೆಂಬಲ ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಕೂಡ ಕಾವೇರಿ ಹೋರಾಟದ ಬಂದ್ಗೆ ಬೆಂಬಲ ಕೊಟ್ಟಿವೆ. ಹೋರಾಟಗಾರರು ಶಾಂತಿಯುತ ಪ್ರತಿಭಟನೆ ಮಾಡ್ತಿದ್ದರು. 144 ಸೆಕ್ಷನ್ ಹಾಕಿದ್ರು. ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿನೇ ಇಲ್ಲ. 144 ಸೆಕ್ಷನ್ ಹಾಕಿ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಕಾವೇರಿ ನೀರಿನ ಬಗ್ಗೆ ದೇವೇಗೌಡರಿಗೆ ಎಲ್ಲವೂ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ದೇವೇಗೌಡರಿಗೆ ಬಂದು ಭೇಟಿ ಆಗಲಿಲ್ಲ. ಸಲಹೆ ಪಡೆಯಲಿಲ್ಲ. ಕೇವಲ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಕೊರೊನಾ ಬಂದು ಎಷ್ಟೋ ಜನ ಮೃತಪಟ್ಟರು. ಕಾವೇರಿ ನೀರು ಖಾಲಿ ಆದ್ರೆ ಜನ ಎಲ್ಲಿ ಉಳಿತಾರೆ. ಕಾವೇರಿ ನೀರಿನ ಬಗ್ಗೆ ಸರ್ಕಾರಕ್ಕೆ ಕಾಳಜಿನೇ ಇಲ್ಲ ಎಂದು ಕೈ ಸರ್ಕಾರದ ವಿರುದ್ಧ ಜಿಟಿಡಿ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ.. 18 ದಿನ 3000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು