ಕಲಬುರಗಿ : ವಿರೋಧ ಪಕ್ಷದ ನಾಯಕರು ಸಾಂವಿಧಾನಿಕ ಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲೆಮೀರಿ ವರ್ತನೆ ಮಾಡಿದರೆ ಸರ್ಕಾರಕ್ಕೂ ನಿಯಮಗಳು ಇರುತ್ತವೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುಡುಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಝೂಮ್ ಮೀಟಿಂಗ್ ಮಾಡಲು ಅವಕಾಶ ನಿರಾಕರಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಸಹ ಮುಖ್ಯಮಂತ್ರಿಯಾದವರು, ಹೇಗಿರಬೇಕು ಎನ್ನುವುದು ಅವರಿಗೂ ಗೊತ್ತಿರಬೇಕು.
ಕೋವಿಡ್ ಒಂದು ಯುದ್ಧ ಕಾಲ. ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಮರೆತು ಜನರ ರಕ್ಷಣೆಯಲ್ಲಿ ತೊಡಗಬೇಕು, ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ರಾಜಕೀಯ ಮಾಡುತ್ತಿದ್ದಾರೆ.
ಅದೇ ಕಾರಣಕ್ಕಾಗಿ ಹೈಕೋರ್ಟ್ ಕಾಂಗ್ರೆಸ್ನವರಿಗೆ ಛೀಮಾರಿ ಹಾಕಿದರೂ, ಸಂವಿಧಾನ ಮರೆತು ವರ್ತನೆ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಸರಕಾರಕ್ಕೂ ಹೈಕೋರ್ಟ್ ಚಾಟಿ ಬೀಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಲಸಿಕೆ ಏಕಾಏಕಿ ತಯಾರು ಮಾಡಲು ಆಗುವುದಿಲ್ಲ. ಉತ್ಪಾದಿಸಿ ಎಲ್ಲಾ ರಾಜ್ಯ, ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಬೇಕು.
ಆ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ. ನ್ಯಾಯಾಲಯ ತೀರ್ಪಿನ ಆಧಾರದಲ್ಲಿ ಎಲ್ಲವನ್ನೂ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.