ಕಲಬುರಗಿ: ಕೇವಲ ಒಂದು ಸಿಗರೇಟ್ ದುಡ್ಡು ಕೇಳಿದ ವಿಚಾರಕ್ಕೆ ಆರಂಭಗೊಂಡ ಜಗಳದಲ್ಲಿ ಎರಡು ವರ್ಷದ ಮಗುವಿನ ಪ್ರಾಣ ತೆಗೆದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿಯ ಫಿರದೋಸ್ ಕಾಲೋನಿಯ ನವಾಜ್ ಕೊಲೆ ಮಾಡಿರುವ ಪ್ರಮುಖ ಆರೋಪಿ.
ಈತನಿಗೆ ಸಾಥ್ ನೀಡಿದ ಸದ್ದಾಮ್, ಅನಿಸ್ ಸೊಹೆಲ್, ಜಹಿರೊದ್ದೀನ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಬಂಧಿತರು. ಎಸಿಪಿ ಇನಾಮದಾರ್ ಮಾರ್ಗದರ್ಶನದಲ್ಲಿ ವಿವಿ ಠಾಣೆಯ ಇನ್ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಗಳು 2021ರ ಡಿಸೆಂಬರ್ 6 ಮತ್ತು 7ರ ನಡುವೆ ಫಿರದೋಸ್ ಕಾಲೋನಿಯ ಮುಜಮಿಲ್ ಎಂಬ ಎರಡು ವರ್ಷದ ಮಗುವನ್ನು ಅಪಹರಿಸಿದ್ದಲ್ಲದೇ ರಾತ್ರಿಯಿಡೀ ಹಿಂಸೆ ನೀಡಿದ್ದರು. ಬಳಿಕ ಮಗುವಿನ ಮನೆ ಹತ್ತಿರದಲ್ಲಿಯೇ ಕಟ್ಟಡ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಮರಳಿನಲ್ಲಿ ಆ ಮಗುವನ್ನು ಹೂತು ಆರೋಪಿಗಳು ಪರಾರಿಯಾಗಿದ್ದರು.
ಪ್ರಕರಣದ ಹಿನ್ನೆಲೆ?: ಕೊಲೆಯಾದ ಎರಡು ವರ್ಷದ ಮಗು ಮುಜಮಿಲ್ ತಂದೆ ನಿಸಾರ್ ಅಹ್ಮದ್ ತಮ್ಮ ಮನೆ ಹತ್ತಿರ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ಪ್ರಮುಖ ಆರೋಪಿ ನವಾಜ್ ಇವರ ಅಂಗಡಿಯಲ್ಲಿ ಸಿಗರೇಟ್ಗಾಗಿ ಉದ್ರಿ(ಸಾಲ) ಮಾಡಿದ್ದ. ನಂತರ ಹಣ ನೀಡುವ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಜನರ ಮುಂದೆ ಮರ್ಯಾದೆ ತೆಗೆದನಲ್ಲ ಅಂತ ಹಗೆತನ ಸಾಧಿಸಿದ ನವಾಜ್, ತನ್ನ ಸಹಚರರೊಂದಿಗೆ ಸೇರಿ ಡಿಸೆಂಬರ್ 6 ರಂದು ನಿಸಾರ್ ಅಹ್ಮದ್ನ ಎರಡು ವರ್ಷದ ಮಗು ಮುಜಮಿಲ್ನನ್ನು ಅಪಹರಿಸಿ ಕೊಂದು ಹಾಕಿದ್ದಾರೆ.
ಪ್ರಕರಣ ನಡೆದು 5 ತಿಂಗಳಾದ್ರೂ ಆರೋಪಿಗಳು ಪತ್ತೆ ಆಗಿರಲಿಲ್ಲ. ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದ ಅವರು ಪ್ರಕರಣ ತಣ್ಣಗಾಗಿದೆ ಎಂದು ಭಾವಿಸಿ ಏನೂ ಅರಿಯದವರಂತೆ ವಾಪಸಾಗಿದ್ದರು. ಆದರೆ, ಆರೋಪಿಗಳನ್ನು ಬಂಧಿಸಲು ಜನಪರ ಸಂಘಟನೆಗಳಿಂದ ಒತ್ತಡ ಬರುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಗೆ ನ್ಯಾಯಾಲಯ ತಕ್ಕ ಶಿಕ್ಷೆ ಏನೋ ನೀಡಲಿದೆ. ಆದ್ರೆ ಇವರ ಕ್ಷುಲ್ಲಕ ಜಗಳದಲ್ಲಿ ಲೋಕದ ಅರಿವೇ ಇಲ್ಲದ ಎರಡು ವರ್ಷದ ಮುಗ್ಧ ಮಗು ಜೀವ ಬಿಡುವಂತಾಗಿದ್ದು ದುರಂತ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ : ಕಿಂಗ್ಪಿನ್ ಆರ್.ಡಿ ಪಾಟೀಲ್ ಮತ್ತೆ ಸಿಐಡಿ ವಶಕ್ಕೆ!