ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಫೈರಿಂಗ್ ನಡೆದಿದ್ದು, ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲಬುರಗಿ ನಗರದ ಗಂಜ್ ಪ್ರದೇಶದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಮಹಾಲಕ್ಷ್ಮಿ ಲೇಟೌಟ್‌ನಲ್ಲಿ ಲಿಂಗರಾಜು ಎಂಬವರಿಗೆ ಸೇರಿದ ನಾಲ್ಕಂತಸ್ತಿನ ಕಟ್ಟಡದ 2ನೇ ಮಹಡಿಯಲ್ಲಿ ರಾತ್ರಿ ಗುಂಡಿನ ಸದ್ದು ಕೇಳಿದೆ. KA-39 A-3333 ನೋಂದಣಿಯ ಮಹೀಂದ್ರ ಸ್ಕಾರ್ಪಿಯೋ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಕಟ್ಟಡದ 2ನೇ ಮಹಡಿಗೆ ಹೋಗಿದ್ದಾನೆ. ಇದನ್ನು ಗಮನಿಸಿದ ಅದೇ ಲೇಔಟ್ನ ಉಮೇಶ್ ಯಳವಂತಗಿ ಎಂಬಾತ ಆ ವ್ಯಕ್ತಿಯನ್ನು ತಡೆದು ಯಾರು ನೀನು?, ಇಷ್ಟು ಹೊತ್ತಿಗೆ ಇಲ್ಲಿಗೇಕೆ ಬಂದೆ ಎಂಬುದಾಗಿ ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿ ಪಿಸ್ತೂಲ್ ತೆಗೆದು ಉಮೇಶ್ ಮೇಲೆ ಫೈರ್ ಮಾಡಿದ್ದಾನೆ. ತಕ್ಷಣ ಉಮೇಶ್ ಸ್ಥಳದಿಂದ ಓಡಿ ಹೋಗಿದ್ದು, ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್
ಆರೋಪಿ ವಶಕ್ಕೆ: ರೋಜಾ ಠಾಣೆ ಪೊಲೀಸರು, ಆರೋಪಿ ಮತ್ತು ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಸುನೀಲ್ ಪಾಟೀಲ್ ಎಂದು ಗುರುತಿಸಲಾಗಿದೆ. ಈತ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದ ನಿವಾಸಿ.
ಕಲಬುರಗಿ ನಗರ ಪೊಲೀಸ್ ಕಮಿಷನರ್ ಆರ್.ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಇಬ್ಬರ ಮಧ್ಯೆ ನಡೆದ ಜಗಳ ಮತ್ತು ಫೈರಿಂಗ್ ಹಿಂದಿನ ಅಸಲಿ ಕಾರಣ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಆರೋಪಿ ಲೈಸನ್ಸ್ ಇರುವ ಗನ್ ಹೊಂದಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ದೂರುದಾರ ಉಮೇಶ್ ವಿರುದ್ಧವೂ ಈ ಹಿಂದೆ ಒಂದು ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಎಸ್ಐ ಪಿಸ್ತೂಲ್ ಕದ್ದು, ಪೊಲೀಸರ ಮೇಲೆಯೇ ಗುಂಡು ಹಾರಿಸಿದ ವ್ಯಕ್ತಿ: ವಿಡಿಯೋ ನೋಡಿ