ಕಲಬುರಗಿ: ಪತ್ರಕರ್ತರಿಗೆ ಮಾನಹಾನಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸಿದ್ರಾಮಯ್ಯ ಎಸ್.ಹಿರೇಮಠ ಅಲಿಯಾಸ್ ಸಿದ್ದು ಹಿರೇಮಠ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪತ್ರಕರ್ತರು ಲೂಟಿಕೋರರು, ಭ್ರಷ್ಟರು, ಇವರೇನು ಸಾಚಾನಾ? ಎಂಬಿತ್ಯಾದಿ ಮಾನಹಾನಿ, ಅವಹೇಳನಕಾರಿ, ಮಾನಸಿಕ ಹಿಂಸೆ ನೀಡುವಂತಹ ಹೇಳಿಕೆಗಳನ್ನು ವಾಟ್ಸ್ ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಇವರು ನಿರಂತರವಾಗಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಕುರಿತಾಗಿ ದಾಖಲೆಗಳ ಸಮೇತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೂರು ನೀಡಲಾಗಿತ್ತು. ಈ ದೂರು ಪರಿಗಣಿಸಿದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕೆಲ ಅಧಿಕಾರಿಗಳ ವಿರುದ್ಧ ಸಲ್ಲದ ಆರೋಪಗಳ ಕುರಿತು ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುತ್ತಾ ಬಂದಿದ್ದಾರೆ. ಜೊತೆಗೆ ಅದನ್ನು ಸಂಬಂಧಿಸಿದವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುತ್ತಾ, ತಮ್ಮೊಂದಿಗೆ ಸಹಕರಿಸದಿದ್ದರೆ ಸುದ್ದಿ ಬರುತ್ತದೆ ಎಂದು ಬೆದರಿಸುವ ಮುಖಾಂತರ ಮಾಧ್ಯಮ ಕ್ಷೇತ್ರವನ್ನು ವಂಚಿಸಿದ್ದಾರೆ ಎನ್ನಲಾಗಿದೆ.
ಇದೀಗ ಪತ್ರಕರ್ತರಿಗೆ ಮಾನಹಾನಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸಿದ್ರಾಮಯ್ಯ ವಿರುದ್ಧ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿ ಸಿಂಗ್ ಠಾಕೂರ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ದೂರು ಸಲ್ಲಿಸಿದ್ದಾರೆ.