ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿ 8 ಸದಸ್ಯ ಸ್ಥಾನಗಳಲ್ಲಿ ನಾಲ್ಕು ಸದಸ್ಯ ಸ್ಥಾನಗಳನ್ನು ಗ್ರಾಮಸ್ಥರು 26 ಲಕ್ಷಕ್ಕೆ ಹರಾಜು ಹಾಕಿದ್ದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳವಾರ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ-1ಕ್ಕೆ ಸದಸ್ಯರ ಸ್ಥಾನಗಳನ್ನು ನಿಯಮಬಾಹಿರವಾಗಿ ಹರಾಜು ಪ್ರಕ್ರಿಯೆ ಮೂಲಕ ಹಣ ಬಲದಿಂದ ಆಯ್ಕೆ ಮಾಡಿದ ಗ್ರಾಮದ 6 ಜನ ಮುಖಂಡರು ಮತ್ತು ಕಾನೂನು ಬಾಹಿರವಾಗಿ ಆಯ್ಕೆಯಾದ 4 ಜನರು ಸೇರಿಸಿ ಒಟ್ಟು 10 ಜನರ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಆಗಿದ್ದು, ಅದರಂತೆ ಯಡ್ರಾಮಿ ತಾಲೂಕಿನ ಬಿಳವಾರ ಒಳಗೊಂಡಂತೆ ವಿವಿಧ ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 27ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಸರ್ಕಾರದ ಚಿತ್ತ ವಿದ್ಯಾಗಮ ಯೋಜನೆಯತ್ತ: ಮತ್ತೆ ಆರಂಭವಾಗಲಿದೆಯಾ ತರಗತಿ?
ಬಿಳವಾರ ಗ್ರಾಮದ ಮುಖಂಡರಾದ ಹೊನ್ನಪ್ಪಾ ಕೊಡಮನಹಳ್ಳಿ, ರಾಮನಗೌಡ ನಾಗರಳ್ಳಿ, ಮಡಿವಾಳಪ್ಪ ಪಡಶೆಟ್ಟಿ, ಮಲ್ಲಣಗೌಡ ಕೋಡಮನಹಳ್ಳಿ, ಗೌಡಪ್ಪ ಬೊಮ್ಮನಹಳ್ಳಿ, ಬಸಪ್ಪಗೌಡ ನವಣಿ ಇವರು ಗ್ರಾಮದಲ್ಲಿ ಚುನಾವಣೆ ನಡೆಯದಂತೆ ತಡೆಯೊಡ್ಡಿದ್ದರುಯ ಎನ್ನಲಾಗುತ್ತಿದೆ. ಇದರ ಜೊತೆಗೆ ಇತರೆ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೆ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘಿಸಿ, ಗ್ರಾಮದ ಗೊಲ್ಲಾಳಪ್ಪ ಮ್ಯಾಗೇರಿ, ಹಣಮಂತ ಭೋವಿ, ಹಣಮಂತರಾಯ ದೊರೆ ಹಾಗೂ ಬಬ್ರುವಾಹನ ಭೋವಿ ಇವರಿಗೆ ಹರಾಜು ಮೂಲಕ 26.55 ಲಕ್ಷ ರೂ.ಗಳಿಗೆ ಸದಸ್ಯ ಸ್ಥಾನಗಳಿಗೆ ಆಯ್ಕೆ ಮಾಡಿದ್ದರು ಎಂಬುದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ಕುರಿತು ಸುದ್ದಿ ಮಾಧ್ಯಮದಲ್ಲಿ ಬಿತ್ತರ ಆಗುತ್ತಿದ್ದಂತೆ ಆರೋಪಿಗಳ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆಯಡಿ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.