ಕಲಬುರಗಿ: 2023ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಲ್ಲಿ ಅಧಿಸೂಚನೆ ಘೋಷಣೆ ಆಗಲಿದ್ದು, ಕಲಬುರಗಿಯಲ್ಲಿ ಕಾಂಗ್ರಸ್ ಪಕ್ಷದ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಭಾರೀ ಕಸರತ್ತು ನಡೆಸ್ತಿದ್ದಾರೆ. ಅದರಲ್ಲೂ ಕಲಬುರಗಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಮಾವ- ಅಳಿಯನ ನಡುವೆ ತೀವ್ರ ಪೈಪೋಟಿ ಶುರುವಾಗಿದೆ.
ಹಿಂದಿನ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಜಿತಗೊಂಡಿದ್ದ ಅಲ್ಲಮಪ್ರಭು ಪಾಟೀಲ್ ಅವರು, ಈ ಬಾರಿಯೂ ಟಿಕೆಟ್ ಪಡೆದು ಚುನಾವಣೆ ಅಖಾಡಕ್ಕೆ ಧುಮುಕಲು ಪ್ರಯತ್ನ ನಡೆಸಿದ್ದಾರೆ. ಒಂದೆಡೆ ಅಲ್ಲಮಪ್ರಭು ಪಾಟೀಲ್ ಟಿಕೆಟ್ ಪಡೆಯಲು ಕಸರತ್ತು ಮುಂದುವರೆಸಿದ್ರೆ, ಅವರ ಅಳಿಯ ಸಂತೋಷ ಬಿಲಗುಂದಿ ಕೂಡ ಕೈ ಟಿಕೆಟ್ ಪಡೆಯಲು ನಾನಾ ತಂತ್ರ ಹೆಣೆದಿದ್ದಾರೆ.
ಹೊಸಮುಖಗಳಿಗೆ ಕೈ ಟಿಕೆಟ್ ನೀಡುವಂತೆ ಪತ್ರ: ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಏಳೆಂಟು ಜನ ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಮಾವ ಅಲ್ಲಮಪ್ರಭು ಪಾಟೀಲ್ ಮತ್ತು ಅಳಿಯ ಸಂತೋಷ ಬಿಲಗುಂದಿ ಮಧ್ಯೆಯೇ ಟಿಕೆಟ್ ಫೈಟ್ ಜೋರಾಗಿದೆ.
ಮಾವ ಅಲ್ಲಮಪ್ರಭು ಪಾಟೀಲ್ ಅವರ ಟಿಕೆಟ್ ತಪ್ಪಿಸಿ ತಾನು ಪಡೆಯಲು ಸಂತೋಷ ಬಿಲಗುಂದಿ ಅವರು ಹೊಸಮುಖಗಳಿಗೆ ಅವುಕಾಶ ನೀಡಬೇಕೆಂದು ತಂತ್ರ ಹೆಣೆದಿದ್ದಾರೆ. ಕಾಂಗ್ರೆಸ್ನ ಇನ್ನುಳಿದ ಟಿಕೆಟ್ ಆಕಾಂಕ್ಷಿತರ ಜತೆಗೂಡಿ ಹೊಸಮುಖಗಳಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ದೆಹಲಿಗೆ ದೌಡಾಯಿಸಿರುವ ಅಲ್ಲಮಪ್ರಭು: ಅಲ್ಲಮಪ್ರಭು ಪಾಟೀಲ್ ಹೆಸರು ಉಲ್ಲೇಖ ಮಾಡದೆ ಹೊಸಮುಖಕ್ಕೆ ಟಿಕೆಟ್ ನೀಡುವಂತೆ ಕೈ ಕಮಾಂಡ್ ಗೆ ಒತ್ತಾಯ ಮಾಡಿದ್ದಾರೆ. ಟಿಕೆಟ್ ಸಿಗುವ ಭಾರೀ ನಿರೀಕ್ಷೆಯಲ್ಲಿದ್ದ ಅಲ್ಲಮಪ್ರಭು ಪಾಟೀಲ್ ಗೆ ಅಳಿಯ ಸಂತೋಷ ಬಿಲಗುಂದಿಯೇ ಸದ್ಯ ಮುಳ್ಳಾದಂತಾಗಿದೆ. ಟಿಕೆಟ್ ಕೈ ತಪ್ಪುವ ಆತಂಕದಲ್ಲಿರೋ ಅಲ್ಲಮಪ್ರಭು ಪಾಟೀಲ್ ಅವರು ಹೇಗಾದ್ರು ಮಾಡಿ ಕೈ ಟಿಕೆಟ್ ಪಡೆಯಲೇಬೇಕು ಅಂತಾ ದೆಹಲಿಗೆ ದೌಡಾಯಿಸಿ ಅಲ್ಲಿಯೇ ಬೀಡು ಬಿಟ್ಟಿದ್ದಾರೆ.
ಒಟ್ಟಾರೆ ಕಲಬುರಗಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಸದ್ಯ ಅಲ್ಲಮಪ್ರಭು ಪಾಟೀಲ್ ಅಥವಾ ಸಂತೋಷ ಬಿಲಗುಂದಿ ಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಕೊನೆಗಳಿಗೆ ವರೆಗೂ ಮಾವ- ಅಳಿಯನ ಮಧ್ಯೆ ಕೈ ಟಿಕೆಟ್ ಪೈಟ್ ಜೋರಾಗಿದೆ.
ಇಬ್ಬರು ಈಗಾಗಲೇ ಕ್ಷೇತ್ರದಲ್ಲಿ ಎಡಬಿಡದೆ ಸಂಚಾರ ಮಾಡಿ ಮತ ಸೆಳೆಯುವ ಎಲ್ಲ ಕಸರತ್ತು ಮಾಡಿದ್ದಾರೆ. ಎರಡು ಕುಟುಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ಒಡನಾಟ ಹೊಂದಿದೆ. ಯಾರಿಗೆ ಟಿಕೆಟ್ ಸಿಗುತ್ತೆ, ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಡ್ತಾರಾ ಅಥವಾ ಬೇರೆ ಅಭ್ಯರ್ಥಿಯತ್ತ ಒಲವು ತೊರಿಸ್ತಾರಾ? ಕಾದು ನೋಡಬೇಕು.
ಇದನ್ನೂಓದಿ:ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವೆ ಬಣ ಸೃಷ್ಟಿ; ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೊಟಕು