ಕಲಬುರಗಿ : ರೈತರಿಗೆ ತಾವು ಬೆಳೆದ ಬೆಳೆಯನ್ನು ಪ್ರಾಣಿ, ಪಕ್ಷಿಗಳಿಂದ ರಕ್ಷಣೆ ಮಾಡೋದೇ ಒಂದು ದೊಡ್ಡ ಸವಾಲು. ಹೊಲದ ಸುತ್ತ ಸೀರೆಯ ಬೇಲಿ ಕಟ್ಟೋದು, ಬೆದರು ಗೊಂಬೆ ಕಟ್ಟೋದು, ಗಂಟೆ ಕಟ್ಟೋದು ಮತ್ತೇನೇನೋ ಮಾಡಿ ಹೊಲಗಳಿಗೆ ಪ್ರಾಣಿ ಪಕ್ಷಿಗಳು ಬರದಂತೆ ತಡೆಯಲು ತಮಗೆ ಗೊತ್ತಿರುವ ನಾನಾ ಕಸರತ್ತುಗಳನ್ನು ಮಾಡ್ತಾರೆ. ಇಲ್ಲೊಬ್ಬ ರೈತ ಒಂದಿಷ್ಟು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಮಿನಿ ರೆಕಾರ್ಡೆಬಲ್ ಮೈಕ್ ಬಳಕೆ ಮಾಡಿ ಬೆಳೆ ರಕ್ಷಣೆ ಮಾಡುವ ಮೂಲಕ ಚಾತುರ್ಯತೆ ತೋರಿಸಿದ್ದಾರೆ.
ವಿವಿಧ ರೀತಿ ಶಬ್ದಗಳನ್ನು ಮಾಡಿ ಬೆಳೆ ತಿನ್ನಲು ಬರುವ ಪ್ರಾಣಿ ಪಕ್ಷಿಗಳನ್ನು ಬೆದರಿಸಿ ಓಡಿಸಬಹುದು. ಆದರೆ ಬೆಳೆ ಬೆಳೆದು ನಿಂತ ಮೇಲೆ ರಾಶಿ ಮಾಡೋವರೆಗೆ ತಿಂಗಳುಗಟ್ಟಲೆ ದಿನಪೂರ್ತಿ ಶಬ್ದ ಮಾಡೋದು ಅದೆಷ್ಟು ಕಷ್ಟ ಅನ್ನೋದು ಅನ್ನದಾತನಿಗೆ ಗೊತ್ತು. ಹೀಗಾಗಿ, ಹೊಲದ ಸುತ್ತ ಸೀರೆಯ ಬೇಲಿ ಕಟ್ಟುವುದು, ಗಾಳಿ ಬೀಸಿದಾಗಲೆಲ್ಲ ಶಬ್ದ ಮಾಡುವಂತೆ ಗಂಟೆ ಕಟ್ಟುವುದು ಇತ್ಯಾದಿ ಪ್ರಯತ್ನ ಮಾಡ್ತಾರೆ. ಆದರೀಗ ತಂತ್ರಜ್ಞಾನದ ಯುಗದಲ್ಲಿರುವ ಅನ್ನದಾತರು ಸಹ ಕೃಷಿಯಲ್ಲಿ ಒಂದಿಷ್ಟು ತಂತ್ರಜ್ಞಾನಗಳ ಬಳಕೆ ಮಾಡುತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಜಂಬಗಾ (ಬಿ) ಗ್ರಾಮದ ಸಿದ್ದಲಿಂಗ ವಾಗ್ದರ್ಗಿ ಎಂಬ ರೈತ ಮಿನಿ ರಿಕಾರ್ಡೇಬಲ್ ಮೈಕ್ ಬಳಕೆ ಮಾಡಿ ಬೆಳೆ ರಕ್ಷಣೆ ಮಾಡುತ್ತಿದ್ದಾರೆ. ಒಂದು ಸಲ ಧ್ವನಿ ರೆಕಾರ್ಡ್ ಮಾಡಿ ಪ್ಲೇ ಮಾಡಿ ಬಿಟ್ರೇ ತಾನಾಗಿಯೇ ಇದು ಧ್ವನಿ ಮಾಡುತ್ತಿರುತ್ತದೆ. ಧ್ವನಿ ರೆಕಾರ್ಡ್ ಮಾಡಿ ಒಂದೆಡೆ ಕಟ್ಟಿದ್ರೆ ಪ್ರಾಣಿ ಪಕ್ಷಿಗಳು ಹೊಲದತ್ತ ಸುಳಿಯಲ್ಲ.
"ಸಾಲ ಮಾಡಿ 3 ಎಕರೆ ಹೊಲದಲ್ಲಿ ಜೋಳ, ಕಡಲೆ ಬೆಳೆದಿದ್ದೇನೆ. ಬೇಸಾಯಕ್ಕೆ ಆಗಿರುವ ತೊಂದರೆಗಿಂತ ಕೈಗೆ ಬಂದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಅದೇನೇ ಹರಸಾಹಸ ಪಟ್ಟರೂ ಪಕ್ಷಿಗಳಿಂದ ಜೋಳ ಉಳಿಸಿಕೊಳ್ಳುವುದು ಸವಾಲಾಗಿತ್ತು. ಇದರ ಮಧ್ಯೆ ರಾತ್ರಿ ಹಂದಿಗಳು ಹೊಲಕ್ಕೆ ದಾಳಿ ಮಾಡಿ ಕಡಲೆ ಬೆಳೆ ನಷ್ಟ ಮಾಡುತ್ತಿದ್ದವು. ಇದರಿಂದ ಬೇಸತ್ತು ಹೋಗಿದ್ದೆ. ಆದ್ರೆ ತರಕಾರಿ ಮಾರಾಟಗಾರನೊಬ್ಬ ರಿಕಾರ್ಡೇಬಲ್ ಮಿನಿ ಅನೌನ್ಸ್ಮೆಂಟ್ ಮೈಕ್ ಬಳಕೆ ಮಾಡಿ ತರಕಾರಿ ಮಾರುವುದನ್ನು ಕಂಡು ನಾನು ಕೂಡಾ ಹೊಸ ಪ್ರಯೋಗ ಮಾಡಿ ಯಶಸ್ವಿ ಆಗಿದ್ದೇನೆ" ಅನ್ನೋದು ಸಿದ್ದಲಿಂಗ ವಾಗ್ದರ್ಗಿ ಮಾತು.
ಇನ್ನು ಸಿದ್ದಲಿಂಗ ಅವರ ಕಾರ್ಯದಿಂದ ಪ್ರೇರಿತರಾದ ಅಕ್ಕಪಕ್ಕದ ರೈತರು ಸಹ ಮಿನಿಮೈಕ್ ಮೊರೆ ಹೋಗ್ತಿದ್ದಾರೆ. ರೈತ ಸಿದ್ದಲಿಂಗ ಅವರ ಪ್ಲ್ಯಾನ್ ವರ್ಕೌಟ್ ಏನೋ ಆಗಿದೆ. ಆದ್ರೆ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿಂದ ಮೈಕ್ ಬ್ಯಾಟರಿ ಚಾರ್ಜ್ ತೊಂದರೆ ಇದೆ. ರಾತ್ರಿ ಗಿಡಗಳಿಗೆ ಮೈಕ್ ಕಟ್ಟಿಟ್ಟು ಹೋದ್ರೆ ಕಳುವಾಗುವ ಆತಂಕ ಕೂಡಾ ಇದೆ.
ಇದನ್ನೂ ಓದಿ : ಸಿಂಗಲ್ ಫೇಸ್ ಕರೆಂಟ್ ಕಣ್ಣಾಮುಚ್ಚಾಲೆಗೆ ಒಣಗುತ್ತಿದೆ ಬೆಳೆ: ಮಂಡಲೂರಿನ ರೈತರ ಬವಣೆ