ಕಲಬುರಗಿ: ಬೆಂಗಳೂರು-ಕಲಬುರಗಿ ನಡುವೆ ಇದ್ದ ವಿಮಾನ ಸೇವೆ ಮೈಸೂರಿಗೂ ವಿಸ್ತರಣೆಯಾಗಿದ್ದು, ಮೈಸೂರು ಹಾಗೂ ಕಲಬುರಗಿ ನಡುವೆ ಅಲಯನ್ಸ್ ಏರ್ ವಿಮಾನವು ನಿತ್ಯ ಹಾರಾಟ ನಡೆಸಲಿದೆ. ಈ ಮುಂಚೆ ಸ್ಟಾರ್ ಏರ್ಸ್ ವಾರದ ಮೂರು ದಿನ ಬೆಂಗಳೂರು-ಕಲಬುರಗಿ ಮಧ್ಯೆ ಹಾರಾಟ ನಡೆಸಿತ್ತು.
ಮೈಸೂರು-ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಲಯನ್ಸ್ ಏರ್ ವಿಮಾನವನ್ನು ಇಂದು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಶಾಸಕ ಬಸವರಾಜ ಮತ್ತಿಮಡು, ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಹಲವು ಗಣ್ಯರು ಈ ವಿಮಾನದಲ್ಲಿ ಬಂದಿಳಿದರು.
ವಿಮಾನ ನಿಲ್ದಾಣದಲ್ಲಿ ಕೇಕ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಮುಖಂಡರು ನೂತನ ವಿಮಾನ ಸೇವೆ ಉದ್ಘಾಟಿಸಿದರು. ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು. ಅಲಯನ್ಸ್ ಏರ್ ವಾರದ ಏಳು ದಿನಗಳಲ್ಲಿಯೂ ಮೈಸೂರು-ಬೆಂಗಳೂರು-ಕಲಬುರಗಿ ನಡುವೆ ಸಂಚರಿಸಲಿದೆ.