ಕಲಬುರಗಿ: ಕರ್ನಾಟಕದ ಬಿಜೆಪಿ ಸಂಸದರು ದೆಹಲಿಯ ಚಾಂದಿನಿ ಚೌಕ್ನಲ್ಲಿ ಚಾಟ್ ತಿನ್ನೋಕೆ ಮಾತ್ರ ಯೋಗ್ಯರು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ಸಂಸದರಿಗೆ ಸಂಸತ್ನಲ್ಲಿ ಜನರ ಪರ ಧ್ವನಿಯೆತ್ತುವ ಧೈರ್ಯವಿಲ್ಲ. ರಾಜ್ಯದ 25 ಜನ ಸಂಸದರು ದೆಹಲಿಯ ಚಾಂದಿನಿ ಚೌಕ್ನಲ್ಲಿ ತಿನ್ನಲು ಮಾತ್ರ ಯೋಗ್ಯರು ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ : ಬಿಜೆಪಿ ಶಾಸಕನ ಸಂಬಂಧಿ ವಿರುದ್ಧ ಐಪಿಎಲ್ ಬೆಟ್ಟಿಂಗ್ ಆರೋಪ: ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ತರಾಟೆ
ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ತಮ್ಮ ಪಕ್ಷದವರನ್ನು ಸಂಸದರನ್ನಾಗಿಸಿದರೆ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಬಿಜೆಪಿ ಹೇಳಿತ್ತು. ಆದರೆ, ರಾಜ್ಯದ ತೆರಿಗೆ ಪಾಲನ್ನೂ ನೀಡದೆ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇಷ್ಟಾದರೂ ಸಂಸದರು ಕೇಳುತ್ತಿಲ್ಲ. ಪ್ರಧಾನಿ ಬಳಿ ಹೋಗಿ ರಾಜ್ಯಕ್ಕೆ ತನ್ನ ಪಾಲು ದೊರಕಿಸಿಕೊಡಿ ಎನ್ನುವ ಶಕ್ತಿ ಬಿಜೆಪಿ ಸಂಸದರಿಗಿಲ್ಲ. ರಾಜ್ಯದ ಹಿತ ಕಾಪಾಡುವಲ್ಲಿ ರಾಜ್ಯದ ಬಿಜೆಪಿ ಸಂಸದರು ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕಡಿಮೆ ತೆರೆಗೆ ಕಟ್ಟೊ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು:
ಕರ್ನಾಟಕದ ಒಬ್ಬ ವ್ಯಕ್ತಿಯಿಂದ 20 ಸಾವಿರ ರೂಪಾಯಿ ಕೇಂದ್ರಕ್ಕೆ ತೆರಿಗೆ ಹೋಗುತ್ತೆ. ಬೇರೆ ರಾಜ್ಯದವರು ಇದರಲ್ಲಿ ಅರ್ಧದಷ್ಟೂ ತೆರಿಗೆ ಕಟ್ತಿಲ್ಲ. ಆದರೆ, ಕಡಿಮೆ ತೆರಿಗೆ ಕೊಡೋ ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚಿನ ಆರ್ಥಿಕ ನೆರವು ಸಿಗುತ್ತಿದೆ. ಮೋದಿ ಸರ್ಕಾರದಿಂದ ರಾಜ್ಯಕ್ಕೆ 60 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಆದ್ರೆ ಇದನ್ನ ಕೇಳೋರೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೆರೆ ಸಂತ್ರಸ್ತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ:
ಕೋವಿಡ್ ನಂತರ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ನೀಡಲ್ಲ. ಕೆಕೆಆರ್ಡಿಬಿಗೂ ಹಣ ಬಿಡುಗಡೆ ಮಾಡಿಲ್ಲ. ನೆರೆ ಸಂತ್ರಸ್ತರಿಗೆ ಇದುವರೆಗೂ ಪರಿಹಾರ ಒದಗಿಸದೇ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇನ್ನು ಭೀಮಾ ತೀರದಲ್ಲಿ ಆದ ಹಾನಿಯ ಮಾಹಿತಿ ಮಾತ್ರ ನೀಡಲಾಗಿದೆ. ಬೆಣ್ಣೆತೊರಾ, ಕಾಗಿಣಾ ನದಿಯಲ್ಲಿ ಆದ ಹಾನಿಯ ಮಾಹಿತಿಯನ್ನೇ ನೀಡಿಲ್ಲ. ಕಲಬುರಗಿ ಜಿಲ್ಲೆಯಲ್ಲಿ 99.71 ಕೋಟಿ ರೂ. ಬೆಳೆ ಹಾನಿ ಲೆಕ್ಕ ತೋರಿಸಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ವರದಿಯನ್ನೇ ಬಿಡುಗಡೆ ಮಾಡಿಲ್ಲ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಹಾನಿಯಾದರೂ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ ಎಂದು ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮಲು ಹೇಳಿಕೆಗೆ ವಿರೋಧ:
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಸಂವಿಧಾನದ ಆರ್ಟಿಕಲ್ 371 (J) ಅಡಿ ಸೇರಿಸಬೇಕು ಎಂಬ ಸಚಿವ ಶ್ರೀರಾಮುಲು ಅವರ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತೀವ್ರ ವಿರೋದ ವ್ಯಕ್ತಪಡಿಸಿದರು. ಈ ಭಾಗದ ಸಾರ್ವಜನಿಕರ ಅವಿರತ ಹೋರಾಟ ಹಾಗೂ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಅವರ ಹೆಚ್ಚಿನ ಮುತುವರ್ಜಿಯಿಂದಾಗಿ ಸಂವಿಧಾನದ ಆರ್ಟಿಕಲ್ 371ಕ್ಕೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಭಾಗವನ್ನು ಸೇರಿಸಿ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಆದರೆ, ಈಗ ಸಚಿವರಾದ ಶ್ರೀರಾಮುಲು ಅವರು ತಾವು ಪ್ರತಿನಿಧಿಸುವ ಮೊಳಕಾಲ್ಮೂರು ತಾಲೂಕನ್ನು ಈ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನಕ್ಕೆ ನಮ್ಮ ಪ್ರಬಲ ವಿರೋಧವಿದೆ ಎಂದು ಹೇಳಿದರು.
ಶ್ರೀರಾಮಲು ಅವರಿಗೆ ಹೋರಾಟದ ಜ್ಞಾನವಿಲ್ಲ. ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈ ಹಿಂದಿನ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕಾಗಿ 371 (J) ಜಾರಿಗೆ ತರಲಾಗಿದೆ. ಹೈ.ಕ ಭಾಗದ ಐತಿಹಾಸಿಕ ಹಾಗೂ ಭೌಗೋಳಿಕ ಹಿನ್ನೆಲೆ ಅರಿವಿರದ ಸಚಿವರು ಮೈಸೂರು ಪ್ರಾಂತ್ಯದ ಚಿತ್ರದುರ್ಗ ಪಾಳೆಗಾರರ ಆಳ್ವಿಕೆಗೆ ಒಳಪಟ್ಟಿದ್ದ ಮೊಳಕಾಲ್ಮೂರು ತಾಲೂಕನ್ನು 371 (J) ಅಡಿ ಸೇರಿಸುವ ಪ್ರಯತ್ನ ಕೈಬಿಡಲಿ ಎಂದು ಆಗ್ರಹಿಸಿದರು.
ಜಾಧವ್ಗೆ ಚಾಲೆಂಜ್:
ಸಂಸದ ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಉತ್ತಮವಾಗಿ ಕೆಲಸ ಮಾಡಿದ್ದನ್ನು ತೋರಿಸಲಿ, ಮುಂದಿನ ಚುನಾವಣೆಯಲ್ಲಿ ನಾನು ಅವರಿಗೇ ಮತ ಹಾಕುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಚಾಲೆಂಜ್ ಮಾಡಿದ್ದಾರೆ.
ಉಮೇಶ್ ಜಾಧವ್ ಜನರ ಕೆಲಸ ಮಾಡೋ ಬದಲಿಗೆ ತಮ್ಮ ಹಕ್ಕುಗಳನ್ನು ಕೇಳೋ ಜನರ ಮೇಲೆ ಕೇಸು ಹಾಕೋ ಕೆಲಸ ಮಾಡ್ತಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ತಮ್ಮನ್ನು ತರಾಟೆಗೆ ತೆಗೆದುಕೊಂಡ ಮುತ್ತಗಾ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಿನಾ ಕಾರಣ ರೈತರ ಮೇಲೆ ಪ್ರಕರಣ ದಾಖಲಿಸಿದ್ದವರ ವಿರುದ್ಧ ನಾನು ಹೋರಾಟ ಮಾಡ್ತೇನೆ. ಮುತ್ತಗಾ ಗ್ರಾಮಸ್ಥರ ಪರವಾಗಿ ನಾನು ನಿಲ್ಲುತ್ತೇನೆ ಎಂದರು.
ಇದನ್ನೂ ಓದಿ: ಶಾಸಕರ ಪತ್ನಿ ಕಾರು ಜಪ್ತಿ ಪ್ರಕರಣ: ಕಲಬುರಗಿ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ವಾಗ್ಯುದ್ಧ