ಕಲಬುರಗಿ: ಕಲಬುರಗಿಯಲ್ಲಿ ನಡೆಯುತ್ತಿರುವ ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದ ಇತಿಹಾಸದಲ್ಲೇ ಗುತ್ತಿಗೆದಾರರು ಯಾವ ಸರ್ಕಾರವನ್ನು 40% ಕಮಿಷನ್ ಎಂದು ಹೇಳಿರಲಿಲ್ಲ. ಸಿಎಂ ಬೊಮ್ಮಾಯಿ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು, ವಿಧಾನಸೌಧ ಗೋಡೆಗಳು ಲಂಚ ಲಂಚ ಎಂದು ಕೂಗುತ್ತಿವೆ. ಬೊಮ್ಮಾಯಿ ಸರ್ಕಾರ ಲಂಚದ ಕೂಪವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವರ್ಗಾವಣೆ, ಪದೋನ್ನತಿಗೆ ಲಂಚ ಕೊಡಬೇಕಾಗಿದೆ. ಅಧಿಕಾರಿಗಳು ಅನಿವಾರ್ಯವಾಗಿ ಲಂಚಕೊಟ್ಟ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಹಿಂದೆಂದು ಕಾಣದಂತ ಅತ್ಯಂತ ಭ್ರಷ್ಟ ಸರ್ಕಾರ ಇದು, ಇಂತಹ ಭ್ರಷ್ಟ ಸರ್ಕಾರ ಇರಬೇಕಾ? ಇರಬಾರ್ದು. ನೀವೆಲ್ಲ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ಮಾಡಬೇಕು ಎಂದು ಮನವಿ ಮಾಡಿದರು.
ಮಲ್ಲಿಕಾರ್ಜುನ್ ಖರ್ಗೆಗೆ ಅಧ್ಯಕ್ಷಗಿರಿ ಹುಡುಕಿಕೊಂಡು ಬಂದಿದೆ: ಎಐಸಿಸಿ ಅಧ್ಯಕ್ಷರಾಗಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷಗಿರಿ ಅದಾಗಿಯೇ ಹುಡುಕಿಕೊಂಡು ಬಂದಿದೆ. ಇದು ನಿಷ್ಟಾವಂತ ಕಾರ್ಯಕರ್ತನಿಗೆ ಸಂದ ಗೆಲುವು. ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರಸ್ ಮತ್ತೆ ಗತವೈಭವಕ್ಕೆ ಮರಳಲಿದೆ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಗತವೈಭವಕ್ಕೆ ಮರಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಜನಪರ ಸರ್ಕಾರ ಸ್ಥಾಪನೆ ಮಾಡಿದಾಗಲೇ ಖರ್ಗೆ ಅವರಿಗೆ ಕೊಡಬಹುದಾದ ನಿಜವಾದ ಕೊಡುಗೆ ಹಾಗೂ ಅಭಿಮಾನ ಎಂದು ಹೇಳಿದರು.
ಕನಿಷ್ಠ 30 ಸ್ಥಾನ ಗೆಲ್ಲಬೇಕು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಸಲ 21 ಸ್ಥಾನ ಗೆದ್ದಿತ್ತು. ಮುಂಬರುವ ಚುನಾವಣೆಯಲ್ಲಿ ಈ ಭಾಗದ ಭಾಗದ ಒಟ್ಟು 41 ಸ್ಥಾನಗಳ ಪೈಕಿ ಕನಿಷ್ಠ 30 ಸ್ಥಾನ ಗೆಲ್ಲಬೇಕು, ಅದಕ್ಕೆ ತಯಾರಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಇನ್ನು, ಸರ್ಕಾರದ ಮೇಲೆ ಖರ್ಗೆ ಅವರು ನಿರಂತರ ಒತ್ತಡ ತಂದು ಈ ಭಾಗಕ್ಕೆ ಆರ್ಟಿಕಲ್ 371(J) ಜಾರಿಗೆ ತಂದರು. ಆದರೆ ಬಿಜೆಪಿ ಸರ್ಕಾರ ಈ ಭಾಗಕ್ಕೆ ಕೇವಲ ಹೆಸರು ಬದಲಾವಣೆ ಮಾಡಿದರು ಎಂದು ಕಿಡಿಕಾರಿದರು.
ನಾನು ಸಿಎಂ ಆಗಿದ್ದಾಗ ಆರ್ಟಿಕಲ್ 371(J) ಜಾರಿಗೆ ತರಲು ಎಚ್ ಕೆ ಪಾಟೀಲ ನೇತೃತ್ವದ ಉಪ ಸಮಿತಿ ಮಾಡಿದ್ದೆ. ನಮ್ಮ ಕಾಲದಲ್ಲಿ 36,000 ಹುದ್ದೆ ತುಂಬಿದ್ದೇವೆ. ಆದರೆ ಈ ಬೇಜವಾಬ್ದಾರಿ ಸರ್ಕಾರ ಒಂದೇ ಒಂದು ಹುದ್ದೆ ತುಂಬಲಿಲ್ಲ ಎಂದು ಮಾಜಿ ಸಿಎಂ ಹರಿಹಾಯ್ದರು.
ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರ ಪ್ರಚಾರದ ಬಲೂನ್ಗೆ ಕೇಂದ್ರ ಬಿಜೆಪಿ ಸರ್ಕಾರವೇ ಸೂಜಿ ಚುಚ್ಚಿದೆ: ಸಿದ್ದರಾಮಯ್ಯ