ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಘೋರ ಅನ್ಯಾಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ನಂತರ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ. ಆದರೆ, ಕಲ್ಯಾಣ ಕರ್ನಾಟಕದ ನಿಜವಾದ ಕಲ್ಯಾಣಕ್ಕೆ ಮಾತ್ರ ಶ್ರಮಿಸಿಲ್ಲ. ಕೆ.ಕೆ.ಆರ್.ಡಿ.ಬಿ.ಗೆ ಇದುವರೆಗೂ ಸಮಿತಿಯನ್ನೇ ರಚಿಸಿಲ್ಲ. ಒಂದು ಸಭೆಯನ್ನೂ ಮಾಡಿಲ್ಲ. ಬಿಜೆಪಿ ಬರೀ ಘೋಷಣೆಗಳನ್ನು ಮಾಡುತ್ತಿದೆಯೇ ಹೊರತು ಅಭಿವೃದ್ಧಿ ಕೆಲಸ ಮಾಡ್ತಿಲ್ಲ. ಕಾಂಗ್ರೆಸ್ ಅವಧಿಯಲ್ಲಿನ ಯೋಜನೆಗಳಿಗೆ ಉದ್ಘಾಟನೆ ಮಾಡಿದ್ದೇ ಅವರ ದೊಡ್ಡ ಸಾಧನೆ. ಬಿಜೆಪಿಯದ್ದು ಭಂಡ ಸರ್ಕಾರವಾಗಿದ್ದು, ಅದರ ಸಾಧನೆ ಶೂನ್ಯ. ಕಲ್ಯಾಣ ಕರ್ನಾಟಕದ ಬಗ್ಗೆ ಮಾತನಾಡೋಕೆ ಬಿಜೆಪಿ ನಾಯಕರಿಗೆ ನೈತಿಕತೆಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಗ್ರಾ.ಪಂ.ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳದ್ದೇ ಮೇಲುಗೈ..!
ಇದೆ ವೇಳೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿಯೂ ಶೇಕಡಾ 60 ರಿಂದ 65 ರಷ್ಟು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ, ತಮ್ಮ ಬೆಂಬಲಿತ ಸದಸ್ಯರೇ ಹೆಚ್ಚು ಗೆದ್ದಿದ್ದಾರೆ ಎಂದು ಬಿಜೆಪಿ ಭ್ರಮಾ ಲೋಕದಲ್ಲಿದೆ. ಕಾಂಗ್ರೆಸ್ ಆಳವಾಗಿ ಬೇರೂರಿದ್ದು, ನೆಲ ಕಚ್ಚುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ಗೆ ಖಂಡ್ರೆ ತಿರುಗೇಟು ನೀಡಿದರು.