ಕಲಬುರಗಿ : ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಾಬುರಾವ್ ಪಾಟೀಲ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಂದಾಪುರದ ಬಸವ ನಗರದಲ್ಲಿರುವ ಮನೆಯ ಮೇಲೆ ಇಂದು ಬೆಳಗ್ಗೆ ಹೈದರಾಬಾದ್ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೆರೆ ರಾಜ್ಯದ ನೋಂದಣಿ ಹೊಂದಿರುವ ಖಾಸಗಿ ಇನ್ನೋವಾ ಕಾರುಗಳಲ್ಲಿ ಅಧಿಕಾರಿಗಳ ತಂಡದವರು ಆಗಮಿಸಿದ್ದಾರೆ. ಸದ್ಯ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿ, ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡ್ತಿದ್ದಾರೆ.
ತಂಡದಲ್ಲಿ ಇಡಿಯ ನಾಲ್ವರು ಅಧಿಕಾರಿಗಳು, ನಾಲ್ಕು ಯೋಧರು, ಮಹಿಳಾ ಅಧಿಕಾರಿಗಳು ಇದ್ದಾರೆ. ಬಾಬುರಾವ್ ಪಾಟೀಲ್, ಮಾಜಿ ಸಚಿವರ ಸಹೋದರರಾಗಿದ್ದು, ಅವರ ಇಂಡಸ್ಟ್ರಿಗಳಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆಗಾಗಿ ಈ ದಾಳಿ ನಡೆದಿದೆ ಎಂದು ಕರ್ನಾಟಕ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ಕೆ ಬಸವರಾಜ, ಸಿಪಿಐ ಅಂಬಾರಾಯ ಕಮಾನಮನಿ ಮೊದಲಾದವರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಐಟಿ ದಾಳಿಯಲ್ಲಿ ಸಿಕ್ಕಿದ್ದು ₹42 ಕೋಟಿಯಲ್ಲ, ₹20 ಕೋಟಿ: ಅಂಬಿಕಾಪತಿ ಪುತ್ರ ಪ್ರದೀಪ್ ಹೇಳಿಕೆ
ಐಟಿ ದಾಳಿಯಲ್ಲಿ ಸಿಕ್ಕಿದ್ದು ₹42 ಕೋಟಿಯಲ್ಲ, ₹20 ಕೋಟಿ( ಬೆಂಗಳೂರು): ಕಳೆದ ವಾರ ಬೆಂಗಳೂರಿನ ಹಲವು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, ಸುಮಾರು 95ಕೋಟಿ ಅಧಿಕ ನಗದು ವಶಪಡಿಸಿಕೊಂಡಿತ್ತು. ಮಾಜಿ ಕಾರ್ಪೊರೇಟರ್ ಸಂಬಂಧಿಯ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿತ್ತು. ಈ ಕುರಿತಾಗಿ ಇಂದು ಗುತ್ತಿಗೆದಾರ ಆರ್.ಅಂಬಿಕಾಪತಿ ಪುತ್ರ ಆರ್.ಎ.ಪ್ರದೀಪ್ ಅವರು ಐಟಿ ಇಲಾಖೆಗೆ ಹಾಜರಾಗಿ ( ಅಕ್ಟೋಬರ್ -17-2023) ಹೇಳಿಕೆ ನೀಡಿದ್ದರು. ಇಲಾಖೆಯ ಪ್ರಾದೇಶಿಕ ಕಚೇರಿಗೆ ಹಾಜರಾಗಿದ್ದ ಅವರು ಸತತ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು.
ವಿಚಾರಣೆ ಮುಗಿಸಿ ಹೊರಬಂದು ಸುದ್ದಿಗಾರರ ಜತೆ ಮಾತನಾಡಿದ್ದ ಅವರು, "ಆರ್. ಟಿ ನಗರ ಸಮೀಪದ ಸುಲ್ತಾನ್‌ಪಾಳ್ಯದ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕ ಹಣ ನನ್ನದೇ. ಆದರೆ, ಅಲ್ಲಿ 42 ಕೋಟಿ ರೂ. ಇರಲಿಲ್ಲ. 20 ಕೋಟಿ ರೂ. ಮಾತ್ರ ಇತ್ತು. ಭೂ ವ್ಯವಹಾರದ ಸಲುವಾಗಿ ಹಣ ಸಂಗ್ರಹ ಮಾಡಿರುವುದು ನಿಜ. ಇಷ್ಟಕ್ಕೂ ದಾಖಲೆಗಳನ್ನು ಐಟಿ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಇನ್ನೂ ಕೆಲವು ದಾಖಲೆಗಳನ್ನು ಕೇಳಿದ್ದು, ಅ. 26ರಂದು ವಿಚಾರಣೆಗೆ ಬರುವಂತೆ ನೊಟೀಸ್ ಕೊಟ್ಟಿದ್ದಾರೆ. ಅಂದು ಕೆಲ ದಾಖಲೆ ಪತ್ರಗಳನ್ನು ಕೊಡುತ್ತೇನೆ. ನನಗೂ ರಾಜಕೀಯಕ್ಕೂ ಸಂಬಂಧ ಇಲ್ಲ. ಐಟಿ ಇಲಾಖೆ ವಿಚಾರಣೆ ನಡೆಯುತ್ತಿರುವ ಕಾರಣಕ್ಕೆ ಹೆಚ್ಚಿನ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.