ಕಲಬುರಗಿ : ಕಳೆದ ಕೆಲ ದಿನಗಳಿಂದ ಭಯಾನಕವಾಗಿ ಭೂಮಿ ಕಂಪಿಸುತ್ತಿದೆ. ಇದರಿಂದ ಭಯಭೀತರಾಗಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಸ್ಥರು ತಮ್ಮ ಕುಟುಂಬಗಳ ಸಮೇತ ಗಂಟು ಮೂಟೆ ಕಟ್ಟಿಕೊಂಡು ಗ್ರಾಮವನ್ನು ತೊರೆಯುತ್ತಿದ್ದಾರೆ.
ಗಡಿಕೇಶ್ವರ ಗ್ರಾಮದಲ್ಲಿ 15 ದಿನಗಳಿಂದ ಭೂಕಂಪನ ಸಂಭವಿಸುತ್ತಿದೆ. ನಿನ್ನೆ ರಾತ್ರಿ 9-55ಕ್ಕೆ 4.1 ತೀವ್ರತೆಯಲ್ಲಿ ಮತ್ತೆ ಭೂಮಿ ಕಂಪಿಸಿದ್ದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಂದು ಬೆಳಗ್ಗೆ ಕೂಡ ಮತ್ತೆ ಭೂಕಂಪಿಸಿದ ಅನುಭವಾಗಿದೆ. ಮನೆಗಳು ನೆಲಕ್ಕುರುಳುತ್ತಿವೆ. ಅನಿವಾರ್ಯವಾಗಿ ಗ್ರಾಮವನ್ನು ತೊರೆಯುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಟ್ರ್ಯಾಕ್ಟರ್, ಎತ್ತಿನ ಬಂಡಿ, ಕಾರು, ಟಂಟಂಗಳ ಮೂಲಕ ಮನೆಯ ಸಾಮಾನು ಸರಂಜಾಮು ಸಮೇತ ಗ್ರಾಮವನ್ನು ಜನರು ತೊರೆಯುತ್ತಿದ್ದಾರೆ. ಈಗಾಗಲೇ ಅರ್ಧದಷ್ಟು ಗ್ರಾಮ ಖಾಲಿಯಾಗಿದೆ. ಇಷ್ಟಾದರೂ ಅಧಿಕಾರಿಗಳು ಗ್ರಾಮಕ್ಕೆ ಬಂದು ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿಕೇಶ್ವರ ಅಲ್ಲದೆ ನಿನ್ನೆ ರಾತ್ರಿ ಚಿಂಚೋಳಿ, ಕಾಳಗಿ ಹಾಗೂ ಸೇಡಂ ಈ ಮೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಭೂಕಂಪನವಾಗಿದೆ. ಇಲ್ಲಿಯ ಜನರು ಕೂಡ ಆತಂಕದಲ್ಲಿದ್ದಾರೆ. ಸರ್ಕಾರ ತಕ್ಷಣ ಇತ್ತ ಗಮನ ಹರಿಸಿ ಜನರ ಆತಂಕಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.