ಕಲಬುರಗಿ: ವೈದ್ಯರ ನಿರ್ಲಕ್ಷ್ಯಕ್ಕೆ ಗ್ರಾಮ ಲೆಕ್ಕಿಗರೊಬ್ಬರು ಸಾವಿಗೀಡಾದ ಘಟನೆ ಕಲಬುರಗಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಮೃತನನ್ನು ಅಫಜಲಪುರ ಗ್ರಾಮ ಲೆಕ್ಕಿಗ ವೀರಭದ್ರಪ್ಪ ನಂದೂರ (44) ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಕಲಬುರಗಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ವಾಂತಿಮಾಡಿಕೊಂಡು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಹೆವಿ ಡೋಸ್ ಇಂಜೆಕ್ಷನ್ ಕೊಟ್ಟಿದ್ದರಿಂದ ಹೀಗಾಗಿದೆ ಎಂದು ಕುಟುಂಬದ ಸದಸ್ಯರ ಆರೋಪ. ರಕ್ತ ತಂದು ಕೊಟ್ಟಿದ್ದರೂ ಅದನ್ನು ರೋಗಿಗೆ ಕೊಡಲೇ ನೀಡದೇ ನಿರ್ಲಕ್ಷ್ಯ ಮಾಡಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ವೀರಭದ್ರಪ್ಪ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
ವೀರಭದ್ರಪ್ಪ ಸಾವನ್ನಪ್ಪುತ್ತಿದ್ದಂತೆಯೇ ಆತನ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಜಿಲ್ಲಾಸ್ಪತ್ರೆಗೆ ಬಂದ ಬ್ರಹ್ಮಪುರ ಠಾಣೆ ಪೊಲೀಸರು, ಕುಟುಂಬದ ಸದಸ್ಯರನ್ನು ಸಮಾಧಾನ ಮಾಡಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.