ಸೇಡಂ: ಸರ್ಕಾರ ನಿರ್ದೇಶಿಸಿದ ಕಟ್ಟುನಿಟ್ಟಿನ ಕ್ರಮಗಳ ಪರಿಮಿತಿಯಲ್ಲಿ ರಂಜಾನ್ ಹಬ್ಬ ಆಚರಿಸಬೇಕು. ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಎಂದು ಡಿವೈಎಸ್ಪಿ ವೀರಭದ್ರಯ್ಯ ಸೂಚನೆ ನೀಡಿದ್ದಾರೆ.
ಕೋವಿಡ್-19 ಹರಡುವ ಭೀತಿ ಹಿನ್ನೆಲೆಯಲ್ಲಿ ಸೇಡಂ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಂಜಾನ್ ಪ್ರಯುಕ್ತ ಮಸೀದಿಗಳಲ್ಲಿ 5 ಹೊತ್ತಿನ ಪ್ರಾರ್ಥನೆ ಮಾಡುವಂತಿಲ್ಲ. ಮಸೀದಿಗಳ ಮುಖಂಡರು ಸಾರ್ವಜನಿಕ ಸಂದೇಶ ನೀಡುವಂತಿಲ್ಲ. ಯಾವುದೇ ರೀತಿಯ ಇಫ್ತಿಯಾರ್ ಕೂಟ ಏರ್ಪಡಿಸುವ ಹಾಗಿಲ್ಲ. ಮಸೀದಿ ಬಳಿ ತಿಂಡಿ ತಿನಿಸುಗಳ ಅಂಗಡಿ ತೆರೆಯುವಂತಿಲ್ಲ ಎಂದು ಸೂಚಿಸಿದ್ದಾರೆ.
ಸಿಪಿಐ ರಾಜಶೇಖರ ಹಳಗೋದಿ ಮಾತನಾಡಿ, ಸರ್ಕಾದ ರೂಪಿಸಿದ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.