ಕಲಬುರಗಿ: ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮುಂದಾಗಿದೆ.
ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಭೀಮಾ ನದಿ ಪಾತ್ರದ ಗ್ರಾಮಗಳು ಜಲಾವೃತ್ತಗೊಂಡು ಗ್ರಾಮಸ್ಥರ ಬದುಕು ಬರ್ಬರವಾಗಿದೆ. ಪ್ರವಾಹದಿಂದ ಮನೆಯಲ್ಲಿರುವ ದವಸ ಧಾನ್ಯಗಳು ನೀರುಪಾಲಾಗಿದ್ದು, ಸಂತ್ರಸ್ತರಿಗೆ ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಅರಿತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸಂತ್ರಸ್ತರ ನೆರೆವಿಗೆ ಮುಂದೆ ಬಂದಿದೆ. ನೌಕರರ ಸಂಘದ ವತಿಯಿಂದ ಇಂದಿನಿಂದ ನೆರೆ ಪೀಡಿತ ಪ್ರದೇಶದಲ್ಲಿ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ. ಕಿಟ್ ವಿತರಿಸಲು ಹೊರಟ ವಾಹನಗಳಿಗೆ ಜಿ.ಪಂ. ಸಿಇಒ ಪಿ.ರಾಜಾ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ನೌಕರರ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು. ಕಲಬುರಗಿ, ಅಫಜಲಪುರ, ಜೇವರ್ಗಿ, ಶಹಾಬಾದ್ ಹಾಗೂ ಚಿತ್ತಾಪುರ ತಾಲೂಕುಗಳಲ್ಲಿ ಸಾವಿರ ಸಂತ್ರಸ್ತರಿಗೆ ಕಿಟ್ ವಿತರಣೆ ಮಾಡಲಾಗುವುದು ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ತಿಳಿಸಿದ್ದಾರೆ.