ಸೇಡಂ: ಆ. 16ರಂದು ಉಪ ಮುಖ್ಯಮಂತ್ರಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇಡಂ ನಗರಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದ್ದಾರೆ.
ತಾಪಂ ಆವರಣದ ಶಾಸಕರ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ವಿವಿಧೆಡೆ ಪೂರ್ಣಗೊಂಡ 60 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು 135 ಕೋಟಿ ವೆಚ್ಚದ ಕಾಮಗಾರಿಗಳಿಗೆ ಗೋವಿಂದ ಕಾರಜೋಳ ಚಾಲನೆ ನೀಡಲಿದ್ದಾರೆ.
ಅಂದು 12 ಗಂಟೆಗೆ ಸುವರ್ಣ ಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಡಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಧೋಳದ ಇಂದಿರಾ ಗಾಂಧಿ ವಸತಿ ಶಾಲೆ, ಸೇಡಂನ ವೆಂಕಟೇಶ ನಗರದ ಮಹಿಳಾ ವಸತಿ ನಿಲಯ, ಲೊಕೋಪಯೋಗಿ ಇಲಾಖೆಯ ವಿಭಾಗೀಯ ಕಚೇರಿ ಸೇರಿದಂತೆ ಅನೇಕ ಮೇಲ್ದರ್ಜೆಗೆರಿಸಿದ ರಸ್ತೆ ಕಾಮಗಾರಿಗಳ ಶಿಲಾನ್ಯಾಸ ನೆರವೇರಲಿದೆ. 125 ಕೋಟಿ ವೆಚ್ಚದ ಚಿಂಚೋಳಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ.
ಕೊರೊನಾ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಆಯ್ದ ಆಮಂತ್ರಿತರ ಸಮ್ಮುಖದಲ್ಲಿ ಸಮಾರಂಭ ಜರುಗಲಿದೆ.