ಕಲಬುರಗಿ : ಅದು ಸಿಮೆಂಟ್ ಕಾರ್ಖಾನೆಗಳು ಹೊಂದಿದ ಜಿಲ್ಲೆಯೆಂಬ ಖ್ಯಾತಿ ಪಡೆದಿದೆ. ಅಲ್ಲಿ ಸಿಮೆಂಟ್ ಕಾರ್ಖಾನೆ ಬಿಟ್ಟರೆ ಬೇರೆ ಯಾವುದೇ ಕಾರ್ಖಾನೆಗಳಿಲ್ಲ. ಹೀಗಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಜನ ಗುಳೆ ಹೋಗೋಕೆ ಶುರು ಮಾಡಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಉದ್ಯೋಗ ನೀಡಿ ಗುಳೆ ಹೋಗುವುದನ್ನ ತಡೆಗಟ್ಟಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಕಲಬುರಗಿ ಜಿಲ್ಲೆ ಇಡೀ ಏಷ್ಯಾ ಖಂಡದಲ್ಲಿಯೇ ಅತ್ಯಂತ ಹೆಚ್ಚಾಗಿ ತೊಗರಿ ಬೆಳೆಯುವ ಪ್ರದೇಶವೆಂಬ ಖ್ಯಾತಿ ಪಡೆದಿದ್ದು, ತೊಗರಿಯ ಕಣಜವೆಂದೇ ಕರೆಯಲ್ಪಡುತ್ತಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಹತ್ತಾರು ಸಿಮೆಂಟ್ ಕಾರ್ಖಾನೆಗಳು ಇದ್ದರೂ ಸಹ ಇಲ್ಲಿನ ಜನರಿಗೆ ದುಡಿಯಲು ಕೆಲಸವಿಲ್ಲ. ಹೀಗಾಗಿ ಹೊಟ್ಟೆಪಾಡಿಗಾಗಿ ಜನ ಮುಂಬೈ, ಹೈದರಾಬಾದ್, ಪುಣೆ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸಂಸಾರ ಸಮೇತ ಗುಳೆ ಹೋಗುತ್ತಾರೆ.
ನರೇಗಾ ಯೋಜನೆಯಲ್ಲಿ ಜನರಿಗೆ ಕೆಲಸ ನೀಡಿ : ಈಗಾಗಲೇ ಕಾಳಗಿ ತಾಲೂಕಿನ ರಟಕಲ್ ತಾಂಡಾ, ರುಮ್ಮನಗೋಡ ತಾಂಡಾ, ಮಗಿ ತಾಂಡಾ ಸೇರಿದಂತೆ ಇನ್ನಿತರ ಗ್ರಾಮಗಳು ಮತ್ತು ತಾಂಡದಿಂದ ಕೆಲಸ ಅರಸಿ ಜನ ಗುಳೆ ಹೋಗುತ್ತಿದ್ದಾರೆ. ಹೀಗಾಗಿ ಜನರು ಗುಳೆ ಹೋಗುವುದನ್ನ ತಡೆಗಟ್ಟಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ, ದುಡಿಯುವ ಕೈಗಳಿಗೆ ಕೆಲಸ ಕೊಡಲು ಜಿಲ್ಲಾ ಪಂಚಾಯತಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಆ್ಯಕ್ಷನ್ ಪ್ಲಾನ್ ಸಿದ್ಧ ಮಾಡಿಕೊಂಡು, ಏಪ್ರಿಲ್ 1ರಿಂದ ಮನರೇಗಾ ಯೋಜನೆಯಲ್ಲಿ ಜನರಿಗೆ ಕೆಲಸ ನೀಡಿ, ಗುಳೆ ಹೋಗುವುದನ್ನ ತಡೆಗಟ್ಟಬೇಕೆಂದು ರೈತ ಹಾಗೂ ಕಾರ್ಮಿಕ ಮುಖಂಡ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಶ್ ಶಶಿ, ಈಗಾಗಲೇ ಜಿಲ್ಲೆಯಲ್ಲಿ ಹಲವು ಕಾಮಗಾರಿಗಳನ್ನ ಗುರುತಿಸಿದ್ದು, ಅವುಗಳಲ್ಲಿ 120 ಕಲ್ಯಾಣಿಗಳ ಹೂಳೆತ್ತುವುದು ಮತ್ತು ಕೆರೆಗಳನ್ನ ಹೂಳೆತ್ತುವ ಕಾರ್ಯಗಳ ಬಗ್ಗೆ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಲಾಗಿದೆ. ಹೀಗಾಗಿ, ಆಯಾ ಕಾಮಗಾರಿಗಳ ವ್ಯಾಪ್ತಿಯ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಲು ಅವಕಾಶವಿದ್ದು, ಅದರಂತೆ ಜನರು ಗುಳೆ ಹೋಗದಂತೆ ತಡೆಗಟ್ಟಲು ಉದ್ಯೋಗ ನೀಡಲಾಗುವುದು ಎಂದರು.
ಕೊರೊನಾ ಸಂದರ್ಭದಲ್ಲಿ ಗುಳೆ ಹೋಗಿದ್ದ ಅನೇಕ ಜನ ವಾಪಸ್ ಬಂದಿದ್ದು, ಆ ಸಮಯದಲ್ಲೂ ಸಹ ದಿನಕ್ಕೆ 300 ರೂಪಾಯಿಯಂತೆ ಉದ್ಯೋಗ ನೀಡಲಾಗಿತ್ತು. ಅದರಂತೆ ಇಗಲೂ ಗುಳೆ ಹೋಗುವ ಜನರಿಗೆ ನರೇಗಾ ಅಡಿಯಲ್ಲಿ ಕೆಲಸ ನೀಡಲಾಗುವುದು ಎಂದು ತಿಳಿಸಿದರು.