ಕಲಬುರಗಿ: ಜಿಂಕೆ ಬೇಟೆಯಾಡುತ್ತಿದ್ದ ಆರೋಪದ ಮೇಲೆ ಕಲಬುರಗಿಯ ಶಾರ್ಪ್ ಶೂಟರ್ ಸೇರಿ ಐವರು ಅಂತರ್ ರಾಜ್ಯ ಜಿಂಕೆ ಬೇಟೆಗಾರರನ್ನು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.
ಹೈಫೈ ಕಾರಿನಲ್ಲಿ ಬಂದು ಜಿಂಕೆ ಬೇಟೆಯಾಡಿ ಮಾಂಸ ಚರ್ಮ ಸಾಗಿಸುತ್ತಿದ್ದರು ಎಂಬ ಆರೋಪ ಇವರ ಮೇಲಿದೆ. ಕಲಬುರಗಿಯ ಮಹಮ್ಮದ್ ಶಾಕೀರ್, ಮಹಮ್ಮದ್ ಅಬ್ದುಲ್ ವಾಹಬ್, ಮಹಮ್ಮದ್ ನಿಜಾಜ್ ಹಾಗೂ ಹೈದರಾಬಾದ್ನ ಮಹಮ್ಮದ್ ಮುಕ್ರಂ, ಮಹಮ್ಮದ್ ಮುನೀರ್ ಬಂಧಿತ ಆರೋಪಿಗಳು ಎಂದು ನಾರಾಯಣ ಖೇಡ್ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಂದ ಒಂದು ಸ್ಕಾರ್ಪಿಯೋ ವಾಹನ, 30.60 ಸ್ಪೋರ್ಟ್ಸ್ ರೈಫಲ್, 12 ಜೀವಂತ ಗುಂಡು, 4 ಚಾಕು, ಜಿಂಕೆ ಮಾಂಸ, ಚರ್ಮವನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹಮ್ಮದ್ ಶಾಕೀರ್ ಕಲಬುರಗಿಯ ಶಾರ್ಪ್ ಶೂಟರ್ ಆಗಿದ್ದು, ರೈಫಲ್ ಅಸೋಸಿಯೇಷನ್ ಸ್ಪೋರ್ಟ್ಸ್ ಮೆಂಬರ್ ಕೂಡಾ ಆಗಿದ್ದಾನೆ ಎನ್ನಲಾಗಿದೆ. ಈತ ಕಲಬುರಗಿಯ ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರನಾಗಿದ್ದು, ಸ್ಪೋರ್ಟ್ಸ್ಗಾಗಿ 30.60 ರೈಫಲ್ ಲೈಸನ್ಸ್ ಪಡೆದು ಬೇಟೆಗೆ ಬಳಸುತ್ತಿದ್ದ ಎಂದು ತಿಳಿದು ಬಂದಿದೆ.
ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆ ನಾಗಲಗೀತ ಮಂಡಲ ಗ್ರಾಮದ ಬಳಿ ಹರಿಯುವ ಮಾಂಜರಿ ನದಿಯ ಪಾತ್ರದಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಿದ್ದು, ಆರೋಪಿಗಳು ಜಿಂಕೆ ಬೇಟೆಯಾಡುವಾಗ ಅನುಮಾನಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿ ಹಿಡಿದು ಕೊಟ್ಟಿದ್ದಾರೆ. ಸಂಗಾರೆಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.