ಕಲಬುರಗಿ: ಮ್ಯಾನ್ ಹೋಲ್ ಕ್ಲೀನ್ ಮಾಡಲು ಹೋಗಿ ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ನಗರದ ಕೈಲಾಶ್ ನಗರದಲ್ಲಿ ನಡೆದಿದೆ.
ಲಾಲ್ ಅಹ್ಮದ್ (25), ರಶೀದ್ (30) ಮೃತ ದುರ್ದೈವಿಗಳಾಗಿದ್ದು, ರಾಜು ಎಂಬಾತನ ಸ್ಥಿತಿ ಗಂಭೀರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಲ ಮಂಡಳಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಕೆಟ್ಟು ನಿಂತ ಡ್ರೈನೇಜ್ಗೆ ಇಳಿದು ಕ್ಲೀನ್ ಮಾಡುವಾಗ ದುರ್ಘಟನೆ ಸಂಭವಿಸಿದೆ. ಮೊದಲು ಓರ್ವ ಕಾರ್ಮಿಕ ಡ್ರೈನೇಜ್ ಒಳಗೆ ಇಳಿದಿದ್ದಾನೆ. ಆತ ಉಸಿರುಗಟ್ಟಿ ಒಳಗೆ ಕುಸಿದಾಗ ಆತನನ್ನು ಉಳಿಸಲು ಮತ್ತೋರ್ವ ಇಳಿದು ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇವರಿಬ್ಬರನ್ನು ರಕ್ಷಿಸಲು ಹೋದ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಮ್ಯಾನ್ ಹೋಲ್ ಸುಮಾರು 20 ಅಡಿ ಆಳವಿದ್ದು, ಕಾರ್ಮಿಕರು ಒಳಗೆ ಇಳಿಯಲು ಹಿಂದೇಟು ಹಾಕಿದರೂ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಒಳಗೆ ಇಳಿಸಿದ್ದರಿಂದ ಅವಘಡ ನಡೆದಿದೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಜಿಮ್ಸ್ ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.